ಮಣಿಪಾಲ: ಎ.14ರಿಂದ ಉಚಿತ ಜೈಪುರ ಕಾಲು ಜೋಡಣಾ ಶಿಬಿರ
ಉಡುಪಿ, ಎ.೧೩: ರೋಟರಿ ಕ್ಲಬ್ ಮಣಿಪಾಲ, ಭಗವಾನ್ ಮಹಾವೀರ್ ಜೈನ್ ವಿಕಲಾಂಗ ಸಹಾಯ ಸಮಿತಿ ಬೆಂಗಳೂರು ಹಾಗೂ ಪೇಜಾವರ ಮಠದ ವತಿಯಿಂದ ರೋಟರಿಯನ್ ಅರುಣಾ ಶೆಣೈ ಸ್ಮಾರಕ ಉಚಿತ ಜೈಪುರ್ ಕೃತಕ ಕಾಲು ಜೋಡಣಾ ಶಿಬಿರ ಎ.೧೪ರಿಂದ ೧೮ರವರೆಗೆ ಮಣಿಪಾಲದಲ್ಲಿ ನಡೆಯಲಿದೆ ಎಂದು ಮಣಿಪಾಲ ರೋಟರಿ ಕ್ಲಬ್‌ನ ರೇಣು ಜಯರಾಮ್ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಬಿರಕ್ಕೆ ಈಗಾಗಲೇ ರಾಜ್ಯಾದ್ಯಂತದಿಂದ ೫೦೦ಕ್ಕೂ ಅಧಿಕ ಮಂದಿ ತಮ್ಮ ಹೆಸರುಗಳನ್ನು ನೊಂದಾಯಿಸಿದ್ದಾರೆ. ೪೫೦ಕ್ಕೂ ಅಧಿಕ ಶಿಬಿರದಲ್ಲಿ ಭಾಗವಹಿಸುವುದನ್ನು ಖಚಿತ ಪಡಿಸಿದ್ದಾರೆ. ಸುಮಾರು ೨೦೦ ಮಂದಿಗೆ ಉಚಿತವಾಗಿ ಜೈಪುರ ಕೃತಕ ಕಾಲುಗಳನ್ನು ಜೋಡಿಸಲು ನಿರ್ಧರಿಸಲಾಗಿದೆ ಎಂದರು.
ಒಂದು ಕಾಲಿಗೆ ೩,೫೦೦ರೂ. ವೆಚ್ಚ ತಗಲಲಿದ್ದು, ಹಲವು ದಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಾಯದಿಂದ ಶಿಬಿರದ ಸಂಪೂರ್ಣ ವೆಚ್ಚ ಸೇರಿದಂತೆ ಎಲ್ಲವೂ ಫಲಾನುಭವಿಗಳಿಗೆ ಉಚಿತವಾಗಿ ದೊರೆಯಲಿದೆ ಎಂದವರು ಹೇಳಿದರು.
ಭಗವಾನ್ ಮಹಾವೀರ್ ಜೈನ್ ವಿಕಲಾಂಗ ಸಹಾಯ ಸಮಿತಿಯ ನುರಿತ ವೈದ್ಯರ ತಂಡ ಶಿಬಿರದಲ್ಲಿ ಭಾಗವಹಿಸಲಿದೆ. ಮಾ.೩೦ರೊಳಗೆ ಹೆಸರು ನೊಂದಾಯಿಸಿದವರು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ ಎಂದರು.
ನಾಳೆ ಅಪರಾಹ್ನದಿಂದ ಶಿಬಿರ ಅಧಿಕೃತವಾಗಿ ಪ್ರಾರಂಭಗೊಳ್ಳಲಿದ್ದು, ಎ.೧೫ರ ಬೆಳಗ್ಗೆ ೧೦ ಗಂಟೆಗೆ ಅನಂತನಗರದಲ್ಲಿರುವ ರೋಟರಿ ಕ್ಲಬ್‌ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದರಲ್ಲಿ ಡಿಎಚ್‌ಓ ಡಾ.ನಾಗಭೂಷಣ ಉಡುಪ, ಮಣಿಪಾಲ ಅಶೋಕ್ ಪೈ, ನಿಯೋಜಿತ ಜಿಲ್ಲಾ ಗವರ್ನರ್ ಡಾ.ಗೌರಿ, ಸಹಾಯ ಗವರ್ನರಒ ಡಾ.ಸುರೇಶ್ ಶೆಣೈ, ರಮೇಶ್ ಶೆಣೈ ಮುಂತಾದವರು ಭಾಗವಹಿಸಲಿದ್ದಾರೆ. ಶಿಬಿರವು ಅನಂತನಗರದ ರೋಟರಿ ಮಕ್ಕಳ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಮಣಿಪಾಲದ ಡಾ.ರಾಜವರ್ಮ ಅರಿಗ, ರವಿ ಕಾರಂತ, ನಾಗರಾಜ ಶೆಟ್ಟಿ, ಡಾ.ಮಾಧವ ಶ್ಯಾನುಭಾಗ್ ಉಪಸ್ಥಿತ ರಿದ್ದರು.







