ಬಿಜೆಪಿಗರಿಂದ ಅಕ್ರಮ ಮರಳುಗಾರಿಕೆ ಆರೋಪ; ಮುಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ಗೆ ಅಭಯಚಂದ್ರ ಜೈನ್ ತರಾಟೆ

ಮುಲ್ಕಿ, ಎ.13: ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಮಾಜಿ ಸಚಿವ ಅಭಯಚಂದ್ರ ಜೈನ್ ಮುಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ರನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆಯಿತು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಸಂಬಂಧ ಸಚಿವ ಈಶ್ವರಪ್ಪ ಅವರನ್ನು ಬಂಧಿಸಬೇಕು ಮತ್ತು ಸಚಿವ ಸಂಪುಟದಿಂದ ವಜಾ ಗೊಳಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಈ ಘಟನೆ ನಡೆಯಿತು.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಲವೆಡೆ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ಎಲ್ಲ ಕಡೆಗಳಲ್ಲೂ ಬಿಜೆಪಿಯವರೇ ಮರಳುಗಾರಿಕೆ ನಡೆಸುತ್ತಿದ್ದಾರೆ. ಮಾಹಿತಿ ಇದ್ದರೂ ಆ ಬಗ್ಗೆ ಯಾಕೆ ಕ್ರಮ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಅಕ್ರಮ ಮರಳು ಗಾರಿಕೆ ದಂಧೆ ನಡೆಸುತ್ತಿರುವ ಬಿಜೆಪಿಗರೊಂದಿಗೆ ಸೇರಿಕೊಂಡಿದ್ದೀರಿ. ಅವರು ಅಕ್ರಮವಾಗಿ ದಂಧೆ ಮಾಡಬಹುದಾ ಎಂದು ಪ್ರಶ್ನಿಸಿದ ಅಭಯಚಂದ್ರ ಜೈನ್ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಇನ್ ಸ್ಪೆಕ್ಟರ್ ರನ್ನು ತರಾಟೆಗೆ ತೆಗೆದು ಕೊಂಡರು.
ತಕ್ಷಣದಿಂದ ಅಕ್ರಮ ಮರಳು ಗಾರಿಕೆ ನಿಲ್ಲಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟವನ್ನು ನಡೆಸಲಾಗುವುದು ಎಂದು ಅಭಯಚಂದ್ರ ಜೈನ್ ತಿಳಿಸಿದರು.