ದ.ಕ. ಜಿಲ್ಲಾ ಡಿಜಿಟಲ್ ಲೈಬ್ರೆರಿಗೆ 8 ಲಕ್ಷಕ್ಕೂ ಅಧಿಕ ಓದುಗರ ನೋಂದಣಿ : ಹೊಸಮನಿ

ಮಂಗಳೂರು : ದ.ಕ. ಜಿಲ್ಲೆಯ ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಡಿಜಿಟಲ್ ಲೈಬ್ರೆರಿಗೆ ಅತ್ಯಲ್ಪ ಅವಧಿಯಲ್ಲಿ ೮ ಲಕ್ಷಕ್ಕೂ ಅಧಿಕ ಸದಸ್ಯರ ನೋಂದಣಿ ಮಾಡಿಸಲಾಗಿದೆ. ಇದು ಇಲಾಖೆಯ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇನ್ನಷ್ಟು ಓದುಗರನ್ನು ಪ್ರೇರೇಪಿಸುವ ಸಲುವಾಗಿ ಆಯಾ ಗ್ರಾಮದ ನಿವಾಸಿಗಳು ಹಾಗೂ ಮಕ್ಕಳಿಗೆ ಡಿಜಿಟಲ್ ಲೈಬ್ರೆರಿ ಕುರಿತ ಮಾಹಿತಿಯನ್ನು ಇಲಾಖೆ ನೀಡಬೇಕಿದೆ ಎಂದು ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ ಕುಮಾರ್ ಎಸ್.ಹೊಸಮನಿ ಹೇಳಿದರು.
ಜಿಲ್ಲಾ ಹಾಗೂ ನಗರ ಗ್ರಂಥಾಲಯ ಮಂಗಳೂರು ವತಿಯಿಂದ ನಗರದ ಬಾವುಟಗುಡ್ಡೆಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಮಂಗಳವಾರ ನಡೆದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದಲ್ಲಿ ೧೩೮ಕ್ಕೂ ಹೆಚ್ಚು ಸದಸ್ಯರನ್ನು ನೋಂದಾಯಿಸಲಾಗಿದೆ. ರಾಜ್ಯಾದ್ಯಂತ ೨.೩೦ ಕೋಟಿ ಮಂದಿ ಕೇವಲ ಎರಡು ವರ್ಷದಲ್ಲಿ ನೋಂದಾಯಿಸಿಕೊಂಡಿರುವುದು ಇತಿಹಾಸ. ಇದಕ್ಕೆ ಗ್ರಂಥಾಲಯ ಇಲಾಖೆಯ ಎಲ್ಲಾ ಅಧಿಕಾರಿ, ಸಿಬ್ಬಂದಿ ವರ್ಗದ ಶ್ರಮ ಶ್ಲಾಘನೀಯ. ಅಂತರಾಷ್ಟ್ರೀಯ ಮಟ್ಟದಲ್ಲಿ ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆದ ನೋಂದಣಿ ಪ್ರಕ್ರಿಯೆಯಿಂದ ಇದು ಸಾಧ್ಯವಾಗಿದೆ. ಗ್ರಂಥಾಲಯದೆಡೆಗೆ ಓದುಗನ ನಡಿಗೆ ಅನ್ನುವ ಧ್ಯೇಯ ವಾಕ್ಯದೊಂದಿಗೆ ಗ್ರಂಥಾಲಯವನ್ನು ಆಕರ್ಷಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕಿದೆ ಎಂದು ಹೊಸಮನಿ ಹೇಳಿದರು.
ಈ ಸಂದರ್ಭ ಮಂಗಳೂರು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾಘವೇಂದ್ರ ಕೆ.ವಿ, ಮುಖ್ಯ ಗ್ರಂಥಾಲಯ ಅಧಿಕಾರಿ ಗಾಯತ್ರಿ, ಗ್ರಂಥಪಾಲಕಿ ಮಮತಾ ರೈ, ಸವಿತಾ ಉಪಸ್ಥಿತರಿದ್ದರು.







