ಮರಿಯುಪೋಲ್ ನಲ್ಲಿ ಉಕ್ರೇನ್ ಸೇನೆ ಶರಣಾಗತಿ: ರಶ್ಯ ಹೇಳಿಕೆ

ಸಾಂದರ್ಭಿಕ ಚಿತ್ರ
ಕೀವ್, ಎ.13: ಉಕ್ರೇನ್ ನ ಅತ್ಯಂತ ಆಯಕಟ್ಟಿನ ಬಂದರು ನಗರ ಮರಿಯುಪೋಲ್ ಮೇಲೆ ಕಳೆದ 6 ವಾರಗಳಿಂದ ಹಾಕಿದ್ದ ದಿಗ್ಬಂಧನದ ಬಳಿಕ ನಗರದಲ್ಲಿದ್ದ ಉಕ್ರೇನ್ ಸೈನಿಕರು ಶಸ್ತ್ರಾಸ್ತ್ರ ಕೆಳಗಿರಿಸಿ ಶರಣಾಗುತ್ತಿದ್ದಾರೆ ಎಂದು ರಶ್ಯ ಬುಧವಾರ ಹೇಳಿದೆ.
ಬಂದರು ನಗರ ಮರಿಯುಪೋಲ್ ನಲ್ಲಿ ಪ್ರತಿರೋಧ ಒಡ್ಡುತ್ತಿದ್ದ ಉಕ್ರೇನ್ ನ 36ನೇ ಮರೈನ್ ಬ್ರಿಗೇಡ್(ಸಾಗರ ದಳ)ದ 1,026 ಯೋಧರು ಸ್ವಯಂಪ್ರೇರಣೆಯಿಂದ ಶಸ್ತ್ರಾಸ್ತ್ರ ಕೆಳಗಿಳಿರಿಸಿ ಶರಣಾಗಿದ್ದಾರೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ. ಈ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಮರಿಯುಪೋಲ್ ನಲ್ಲಿ ರಶ್ಯ ಸೇನೆ ನರಮೇಧ ನಡೆಸಿದೆ ಎಂದಿದ್ದಾರೆ.
ರಶ್ಯ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ಬುಧವಾರದ ಕೆಲವು ಮಹತ್ವದ ಬೆಳವಣಿಗೆಗಳು ಹೀಗಿವೆ:
ಮರಿಯುಪೋಲ್ ನಲ್ಲಿ 162 ಅಧಿಕಾರಿಗಳ ಸಹಿತ ಉಕ್ರೇನ್ ಸೇನೆಯ 1,026 ಯೋಧರು ಶರಣಾಗಿದ್ದಾರೆ ಎಂದು ರಶ್ಯದ ರಕ್ಷಣಾ ಇಲಾಖೆಯ ಹೇಳಿಕೆ. ಯೋಧರು ಶರಣಾಗಿರುವ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ಉಕ್ರೇನ್ ರಕ್ಷಣಾ ಇಲಾಖೆ ಪ್ರತಿಕ್ರಿಯೆ.
ನಗರದಲ್ಲಿ ಇನ್ನೂ 1 ಲಕ್ಷಕ್ಕೂ ಅಧಿಕ ಮಂದಿ ಸಿಕ್ಕಿಬಿದ್ದಿರುವುದಾಗಿ ಮರಿಯುಪೋಲ್ ಮೇಯರ್ ವ್ಯಾದಿಮ್ ಬೊಯ್ಶೆಂಕೊ ಹೇಳಿಕೆ. ಸುಮಾರು ಒಂದೂವರೆ ತಿಂಗಳಾವಧಿಯ ಮುತ್ತಿಗೆ ಸಂದರ್ಭ ರಶ್ಯದ ಯೋಧರು 21,000ಕ್ಕೂ ಅಧಿಕ ನಾಗರಿಕರನ್ನು ಹತ್ಯೆಗೈದಿವೆ ಎಂದವರು ಹೇಳಿದ್ದಾರೆ.
ಉಕ್ರೇನ್ನಲ್ಲಿ ರಶ್ಯವು ರಂಜಕ ಬಾಂಬ್(ಫಾಸ್ಫೊರಸ್ ಬಾಂಬ್)ಗಳನ್ನು ಬಳಸುವ ಮೂಲಕ ಪ್ರಜೆಗಳನ್ನು ಹೆದರಿಸುವ ತಂತ್ರ ಹೂಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಉದಾತ್ತ ಕಾರಣಗಳಿಗಾಗಿ ಉಕ್ರೇನ್ ಮೇಲಿನ ಆಕ್ರಮಣ ನಡೆದಿದೆ ಮತ್ತು ಕನಿಷ್ಟ ನಷ್ಟದ ಗುರಿಯೊಂದಿಗೆ, ತಮ್ಮ ದೇಶ ನಡೆಸುತ್ತಿರುವ ಆಕ್ರಮಣವು ಶಾಂತವಾಗಿ ಮತ್ತು ಯೋಜನೆಯ ಪ್ರಕಾರವೇ ಸಾಗುತ್ತಿದೆ. ಉಕ್ರೇನ್ ಜತೆಗಿನ ಶಾಂತಿ ಮಾತುಕತೆ ಪ್ರಗತಿ ಸಾಧಿಸುವ ಭರವಸೆಯಿಲ್ಲದ ಪರಿಸ್ಥಿತಿಗೆ ಬಂದು ತಲುಪಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿಕೆ.
ಬುಧವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯಲ್ಲಿ ಈಶಾನ್ಯದ ಕಾರ್ಖಿವ್ ವಲಯದಲ್ಲಿ ರಶ್ಯದ ವಾಯುದಾಳಿಯಲ್ಲಿ ಕನಿಷ್ಟ 7 ಮಂದಿ ಸಾವನ್ನಪ್ಪಿದ್ದು 22 ಮಂದಿ ಗಾಯಗೊಂಡಿರುವುದಾಗಿ ಅಲ್ಲಿನ ಗವರ್ನರ್ ಒಲೆಹ್ ಸಿನೆಗುಬೊವ್ ಹೇಳಿಕೆ.
ಬುಚಾ ನಗರದಲ್ಲಿ 400 ಮೃತದೇಹ ಪತ್ತೆಯಾಗಿದೆ. 25 ಮಹಿಳೆಯರ ಮೇಲೆ ರಶ್ಯ ಯೋಧರು ಅತ್ಯಾಚಾರ ಎಸಗಿರುವುದಾಗಿ ವರದಿಯಾಗಿದೆ ಎಂದು ಬುಚಾದ ಮೇಯರ್ ಹೇಳಿದ್ದಾರೆ.
ಯುದ್ಧ ಆರಂಭವಾದಂದಿನಿಂದ ದೇಶ ಬಿಟ್ಟು ತೆರಳಿದ್ದ ಸುಮಾರು 8,70,000 ಉಕ್ರೇನ್ ಪ್ರಜೆಗಳು ಮತ್ತೆ ದೇಶಕ್ಕೆ ವಾಪಸಾಗಿರುವುದಾಗಿ ಉಕ್ರೇನ್ ಗಡಿಭದ್ರತಾ ಪಡೆಯ ಹೇಳಿಕೆ.
ಈ ಮಧ್ಯೆ, ಗೃಹಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಬಂಧನದಲ್ಲಿರುವ ಪುಟಿನ್ ಅವರ ನಿಕಟ ಮಿತ್ರ, ಉಕ್ರೇನ್ ನ ಉದ್ಯಮಿ ವಿಕ್ಟರ್ ಮೆಡೆವೆಡ್ಚುಕ್ರನ್ನು ರಶ್ಯ ಸೇನೆಯ ಬಂಧನಲ್ಲಿರುವ ಉಕ್ರೇನ್ ಪ್ರಜೆಗಳ ಜತೆ ವಿನಿಮಯ ಮಾಡಿಕೊಳ್ಳಲು ಸಿದ್ಧ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿಕೆ ನೀಡಿದ್ದಾರೆ.
ಉಕ್ರೇನ್ ನಲ್ಲಿ ರಶ್ಯ ಸೇನೆಯಿಂದ ನರಮೇಧ: ಬೈಡನ್ ಆರೋಪ
ಉಕ್ರೇನ್ನಲ್ಲಿ ರಶ್ಯದ ಸೇನೆ ನರಮೇಧ ನಡೆಸುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಇದೇ ಪ್ರಥಮ ಬಾರಿಗೆ ರಶ್ಯದ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ. ʼಹೌದು, ಇದನ್ನು ನಾನು ನರಮೇಧ ಎಂದು ಕರೆಯುತ್ತೇನೆ. ಉಕ್ರೇನ್ ಪ್ರಜೆಗಳ ಅನನ್ಯತೆಯನ್ನು ಅಳಿಸಿಹಾಕಲು ಪುಟಿನ್ ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗುತ್ತಾ ಹೋಗುತ್ತಿದೆʼ ಎಂದು ಸುದ್ಧಿಗಾರರ ಜತೆ ಮಾತನಾಡಿದ ಬೈಡನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.







