ಭಾರತೀಯ ಮುಸ್ಲಿಮರು ಕೋಮು ಹಿಂಸೆ, ತಾರತಮ್ಯಕ್ಕೆ ಸುಲಭ ಗುರಿಗಳಾಗಿದ್ದಾರೆ: ಅಮೆರಿಕ ಸರಕಾರದ ವರದಿ

Photo: PTI
ಹೊಸದಿಲ್ಲಿ,ಎ.13: ಭಾರತದಲ್ಲಿ ಮುಸ್ಲಿಮರು ಕೋಮು ಹಿಂಸಾಚಾರ ಮತ್ತು ತಾರತಮ್ಯಕ್ಕೆ ಸುಲಭದ ಗುರಿಗಳಾಗಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯು ಬೆಟ್ಟು ಮಾಡಿದೆ. ಮಂಗಳವಾರ ಬಿಡುಗಡೆಗೊಂಡ 2021ರಲ್ಲಿ ವಿವಿಧ ದೇಶಗಳಲ್ಲಿ ಮಾನವ ಹಕ್ಕುಗಳ ಪಾಲನೆ ಬಗ್ಗೆ ತನ್ನ ವರದಿಯಲ್ಲಿ ಭಾರತ ಕುರಿತು ಅಧ್ಯಾಯದಲ್ಲಿ ಅದು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ, ಕಾನೂನುಬಾಹಿರ ಹತ್ಯೆಗಳು, ಪೊಲೀಸರು ಮತ್ತು ಜೈಲು ಅಧಿಕಾರಿಗಳು ಅಲ್ಪಸಂಖ್ಯಾತಕರನ್ನು ಅವಮಾನಕಾರಿಯಾಗಿ ನಡೆಸಿಕೊಳ್ಳುವುದು ಅಥವಾ ಶಿಕ್ಷಿಸುವುದು ಮತ್ತು ಸರಕಾರಿ ಅಧಿಕಾರಿಗಳಿಂದ ನಿರಂಕುಶ ಬಂಧನಗಳು ಅಥವಾ ವಶಕ್ಕೆ ತೆಗೆದುಕೊಳ್ಳುವುದು ಸೇರಿದಂತೆ ಹಲವಾರು ಕಳವಳಗಳನ್ನು ವರದಿಯು ಉಲ್ಲೇಖಿಸಿದೆ.
ಕಾನೂನಿನ ದುರುಪಯೋಗ ಮತ್ತು ಭ್ರಷ್ಟಾಚಾರಗಳನ್ನು ತಡೆಯಲು ಸರಕಾರದ ಪ್ರಯತ್ನಗಳ ಹೊರತಾಗಿಯೂ ಅಧಿಕಾರಿಗಳ ದುರ್ವರ್ತನೆಗೆ ಉತ್ತರದಾಯಿತ್ವದ ಕೊರತೆಯು ಸರಕಾರದ ಎಲ್ಲ ಮಟ್ಟಗಳಲ್ಲಿ ಮುಂದುವರಿದಿದೆ ಮತ್ತು ಇದು ಅಧಿಕಾರಿಗಳಲ್ಲಿ ವ್ಯಾಪಕ ನಿರ್ಭಯತೆಯನ್ನು ಹುಟ್ಟುಹಾಕಿದೆ ಎಂದಿರುವ ವರದಿಯು, ಭೀಮಾ-ಕೋರೆಗಾಂವ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರರ ಬಂಧನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್ಎ)ಯಡಿ ಕಾಶ್ಮೀರಿ ಪತ್ರಕರ್ತರ ವಿರುದ್ಧದ ಪ್ರಕರಣಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಬಂಧನಗಳನ್ನು ಎತ್ತಿ ತೋರಿಸಿದೆ.
ಉ.ಪ್ರದೇಶದ ಕಾನ್ಪುರದಲ್ಲಿ ಮುಸ್ಲಿಮರನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ದ ಮತ್ತು ಜೈ ಶ್ರೀರಾಮ ಘೋಷಣೆಯನ್ನು ಕೂಗುವಂತೆ ಅವರನ್ನು ಬಲವಂತಗೊಳಿಸಿದ್ದ ಹಾಗೂ ಕಳೆದ ವರ್ಷ ಅಸ್ಸಾಮಿನ ದರಾಂಗ್ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಗ್ರಾಮಸ್ಥರನ್ನು ತೆರವುಗೊಳಿಸುವಾಗ ಪೊಲೀಸ್ ಗೋಲಿಬಾರ್ ನಡೆದಿದ್ದ ಘಟನೆಗಳನ್ನೂ ವರದಿಯು ಉಲ್ಲೇಖಿಸಿದೆ.
ಮುಸ್ಲಿಮರಿಗೆ ದೈಹಿಕ ಕಿರುಕುಳ, ತಾರತಮ್ಯ, ಬಲವಂತದ ಸ್ಥಳಾಂತರ ಮತ್ತು ಶಂಕಿತ ಜಾನುವಾರು ಕಳ್ಳಸಾಗಣೆ ಆರೋಪದಲ್ಲಿ ಅವರ ಹತ್ಯೆಗಳ ಪ್ರಕರಣಗಳು 2021ರಲ್ಲಿ ಮುಂದುವರಿದಿದ್ದವು ಎಂದು ವರದಿಯು ಹೇಳಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳಲು ಧಾರ್ಮಿಕ ಮತಾಂತರಗಳ ನಿಷೇಧ ಕಾನೂನಿನ ಬಳಕೆಯನ್ನೂ ವರದಿಯು ಉಲ್ಲೇಖಿಸಿದೆ.
ಈ ಕಾನೂನುಗಳು ವಿವಾಹದ ಮೂಲಕ ಬಲವಂತದ ಮತಾಂತರವನ್ನು ಕ್ರಿಮಿನಲ್ ಅಪರಾಧವನ್ನಾಗಿಸಿವೆ ಮತ್ತು ಮುಖ್ಯವಾಗಿ ಹಿಂದು ಮಹಿಳೆಯರನ್ನು ಮದುವೆಯಾಗಲು ಯತ್ನಿಸುತ್ತಿರುವ ಮುಸ್ಲಿಮ್ ಪುರುಷರನ್ನು ಗುರಿಯಾಗಿಸಿಕೊಂಡಿವೆ ಎಂದು ವರದಿಯು ತಿಳಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಮುಸ್ಲಿಮರನ್ನು ಅದರ ಫಲಾನುಭವಿಗಳ ವರ್ಗದಿಂದ ಹೊರಗಿರಿಸಿರುವುದನ್ನೂ ವರದಿಯಲ್ಲಿ ಗಮನಿಸಲಾಗಿದೆ. ಯುಎಪಿಎಯಂತಹ ಬಂಧನ ಕಾನೂನುಗಳು ನಿರಂಕುಶವಾಗಿವೆ ಎಂದು ವರದಿಯು ಬೆಟ್ಟು ಮಾಡಿದೆ.
ಭಿಮಾ-ಕೋರೆಗಾಂವ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಫಾ. ಸ್ಟಾನ್ ಸ್ವಾಮಿಯವರನ್ನು ಜೈಲಿನಲ್ಲಿ ನಡೆಸಿಕೊಂಡಿದ್ದ ರೀತಿಯನ್ನು ವರದಿಯು ಪ್ರಸ್ತಾವಿಸಿದೆ. 2020, ಸೆ.14ರಂದು ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭ ಬಂಧಿಸಲ್ಪಟ್ಟ ಜೆಎನ್ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ವಿಚಾರಣೆಯ ಆರಂಭವನ್ನು ಪ್ರಾಸಿಕ್ಯೂಟರ್ ಗಳು ವಿಳಂಬಿಸಿರುವುದನ್ನು ವರದಿಯು ಉಲ್ಲೇಖಿಸಿದೆ. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಮತ್ತು ಪಿಎಸ್ಎಗಳ ದುರ್ಬಳಕೆಯನ್ನೂ ವರದಿಯು ಬೆಟ್ಟು ಮಾಡಿದೆ.







