ಐಎನ್ಎಸ್ ವಿಕ್ರಾಂತ್ ನಿಧಿ ಪ್ರಕರಣ: ಕಿರೀಟ್ ಸೋಮೈಯಾಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ಹೈಕೋರ್ಟ್
ಮುಂಬೈ,ಎ.13: ನಿಷ್ಕ್ರಿಯಗೊಂಡಿರುವ ನೌಕಾಪಡೆಯ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ಉಳಿಸಲು ಸಂಗ್ರಹಿಸಲಾಗಿದ್ದ 57 ಕೋ.ರೂ.ಗೂ ಅಧಿಕ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಆರೋಪವನ್ನು ಎದುರಿಸುತ್ತಿರುವ ಬಿಜೆಪಿ ನಾಯಕ ಕಿರೀಟ್ ಸೋಮೈಯಾ ಅವರಿಗೆ ಬಾಂಬೆ ಉಚ್ಚ ನ್ಯಾಯಾಲಯವು ಬುಧವಾರ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ನೀಡಿದೆ. ಒಂದು ವೇಳೆ ಪ್ರಕರಣದಲ್ಲಿ ಸೋಮೈಯಾ ಅವರನ್ನು ಬಂಧಿಸಿದರೆ 50,000 ರೂ.ಗಳ ವೈಯಕ್ತಿಕ ಬಾಂಡ್ ನಲ್ಲಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ನ್ಯಾ.ಅನುಜಾ ಪ್ರಭುದೇಸಾಯಿ ಅವರ ಏಕ ನ್ಯಾಯಾಧೀಶ ಪೀಠವು ಆದೇಶಿಸಿತು.
ಪ್ರಕರಣರದ ತನಿಖೆಯಲ್ಲಿ ಪೊಲೀಸರೊಂದಿಗೆ ಸಹಕರಿಸುವಂತೆ ಸೋಮೈಯಾಗೆ ನಿರ್ದೇಶ ನೀಡಿದ ನ್ಯಾ.ಪ್ರಭುದೇಸಾಯಿ, ಎ.18ರಿಂದ ನಾಲ್ಕು ದಿನಗಳ ಕಾಲ ಬೆಳಿಗ್ಗೆ 11ರಿಂದ ಅಪರಾಹ್ನ 2 ಗಂಟೆಯ ನಡುವೆ ಪ್ರಕರಣದ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಿದರು.
ನಿರೀಕ್ಷಣಾ ಜಾಮೀನು ಕೋರಿ ಸೋಮೈಯಾ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಎ.28ರಂದು ನಡೆಸಲಿದೆ. ಮಾಜಿ ಸೇನಾ ಸಿಬ್ಬಂದಿಯೋರ್ವರ ದೂರಿನ ಮೇರೆಗೆ ಇಲ್ಲಿಯ ಟ್ರಾಂಬೆ ಠಾಣಾ ಪೊಲೀಸರು ಕಳೆದ ವಾರ ಕಿರೀಟ್ ಮತ್ತು ಅವರ ಪುತ್ರ ನೀಲ್ ಸೋಮೈಯಾ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ವಿಕ್ರಾಂತ್ ನೌಕೆಯ ಪುನರುಜ್ಜೀವನಕ್ಕಾಗಿ ಸೋಮೈಯಾ 2013ರಲ್ಲಿ ಸಾರ್ವಜನಿಕರಿಂದ 57 ಕೋ.ರೂ.ಗಳನ್ನು ಸಂಗ್ರಹಿಸಿದ್ದು,ಬಳಿಕ ಅದನ್ನು ದುರುಪಯೋಗಿಸಿಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದು ಅತ್ಯಂತ ರಾಜಕೀಯಗೊಂಡಿರುವ ವಿಷಯವಾಗಿದೆ ಎಂದು ಬುಧವಾರ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ ಸೋಮೈಯಾ ಪರ ವಕೀಲ ಅಶೋಕ ಮುಂಡರಗಿ ಅವರು, ನಿಷ್ಕ್ರಿಯಗೊಂಡಿದ್ದ ವಿಕ್ರಾಂತ ನೌಕೆಗಾಗಿ ಹಿಂದೆ ನಡೆದಿದ್ದ ಹಲವಾರು ಅಭಿಯಾನಗಳ ಭಾಗವಾಗಿ ಸೋಮೈಯಾ ಅವರು 2013ರಲ್ಲಿ ಮುಂಬೈನ ಚರ್ಚ್ ಗೇಟ್ ನಿಲ್ದಾಣದಲ್ಲಿ ನಡೆದಿದ್ದ ನಿಧಿ ಸಂಗ್ರಹದ ನೇತೃತ್ವನ್ನು ವಹಿಸಿದ್ದರು. ಆ ಸಂದರ್ಭ 11,224 ರೂ.ಗಳನ್ನು ಸಂಗ್ರಹಿಸಲಾಗಿತ್ತು. 2014ರಲ್ಲಿ ರಾಜ್ಯ ಸರಕಾರ ಮತ್ತು ಬೃಹನ್ಮುಂಬೈ ಮಹಾನಗರ ಪಾಲಿಕೆ ವಿಕ್ರಾಂತ್ ಅನ್ನು ಪುನರುಜ್ಜೀವನಗೊಳಿಸುವ ಉಪಕ್ರಮದಿಂದ ಹಿಂದೆ ಸರಿದಿದ್ದವು ಮತ್ತು ನೌಕೆಯನ್ನು ಗುಜರಿಗೆ ನೀಡಲಾಗಿತ್ತು. ಈ 57 ಕೋ.ರೂ.ಎಲ್ಲಿಂದ ಬಂತು ಎನ್ನುವುದು ಯಾರಿಗೂ ತಿಳಿದಿಲ್ಲ ಎಂದು ಹೇಳಿದರು.
ಚರ್ಚ್‌ಗೇಟ್‌ನಲ್ಲಿ ಸಂಗ್ರಹಿಸಿದ್ದ 11,224 ರೂ.ಗಳು ಏನಾದವು ಎನ್ನುವುದು ಸೋಮೈಯಾಗೆ ಗೊತ್ತಿದೆಯೇ ಎಂಬ ನ್ಯಾಯಾಲಯದ ಪ್ರಶ್ನೆಗೆ ಮುಂಡರಗಿ,‘ನನಗೆ ಖಚಿತವಿಲ್ಲ. ಈ ಕುರಿತು ನಮ್ಮ ಪತ್ರಕ್ಕೆ ರಾಜ್ಯಪಾಲರು ಉತ್ತರಿಸಿಲ್ಲ. ಹಣ ಪಕ್ಷದ ಯಾವುದಾದರೂ ಕಾರ್ಯಕರ್ತನ ಬಳಿ ಇದ್ದಿರಬೇಕು ಅಥವಾ ಎಲ್ಲಿಯಾದರೂ ಠೇವಣಿ ಮಾಡಿರಬಹುದು ’ ಎಂದು ಉತ್ತರಿಸಿದರು.
ಎಫ್‌ಐಆರ್‌ನಲ್ಲಿಯ ಆರೋಪಗಳು ಅಸ್ಪಷ್ಟವಾಗಿವೆ ಮತ್ತು ಮುಖ್ಯವಾಗಿ ಮಾಧ್ಯಮ ವರದಿಗಳನ್ನು ಆಧರಿಸಿವೆ. ದೂರಿಗೆ ಯಾವುದೇ ಆಧಾರವಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ದುರದೃಷ್ಟವಶಾತ್ 2013ರಿಂದ 2022ರವರೆಗೆ ಈ ವಿಷಯದಲ್ಲಿ ಏನನ್ನೂ ಮಾಡಿರಲಿಲ್ಲ,ದೂರನ್ನು ದಾಖಲಿಸಿರಲಿಲ್ಲ ಎಂದು ಬೆಟ್ಟು ಮಾಡಿದ ನ್ಯಾ.ಪ್ರಭುದೇಸಾಯಿ,ಈ ಹಿನ್ನೆಲೆಯಲ್ಲಿ ಇದು ಮಧ್ಯಂತರ ಪರಿಹಾರಕ್ಕೆ ಅರ್ಹ ಪ್ರಕರಣವಾಗಿದೆ ಎಂದು ಹೇಳಿದರು.







