ಅಂಬೇಡ್ಕರ್ರ ‘ಹಿಂದು ಕೋಡ್ ಬಿಲ್’ನ್ನು ಕಾನೂನಾಗಿ ರೂಪಿಸಿ: ಹಿಂದುತ್ವವಾದಿಗಳಿಗೆ ದಿನೇಶ್ ಅಮೀನ್ ಮಟ್ಟು ಸವಾಲು

ಉಡುಪಿ : ಅಂಬೇಡ್ಕರ್ ಹಿಂದು ಧರ್ಮದ ಸುಧಾರಣೆಗಾಗಿ ಮಹಿಳೆಯರಿಗೆ ಆಸ್ತಿ ಹಕ್ಕು, ಅಂತರ್ಜಾತಿ ವಿವಾಹವನ್ನೊಳಗೊಂಡ ಹಿಂದು ಕೋಡ್ ಬಿಲ್ನ್ನು ರೂಪಿಸಿದ್ದರು. ಇಂದಿನ ಹಿಂದುತ್ವವಾದಿಗಳು ಬೇರೆ ಧರ್ಮದ ಸುಧಾರಣೆ ಮಾಡುವ ಬದಲು ಹಿಂದು ಧರ್ಮದ ಸುಧಾರಣೆಗಾಗಿ ಅಂಬೇಡ್ಕರ್ ರೂಪಿಸಿದ ಹಿಂದು ಕೋಡ್ ಬಿಲ್ನ್ನು ಕಾನೂನು ಆಗಿ ಮಾಡಬೇಕು. ಅದು ಸಾಧ್ಯವಾಗದಿದ್ದರೆ ಬಹಿರಂಗವಾಗಿ ಒಪ್ಪಿಕೊಳ್ಳುವ ಕೆಲಸ ಮಾಡಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಸವಾಲು ಹಾಕಿದ್ದಾರೆ.
ಉಡುಪಿ ಸಹಬಾಳ್ವೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೆ ಜನ್ಮದಿನದ ಪ್ರಯುಕ್ತ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ವಿಶೇಷ ಸಾರ್ವ ಜನಿಕ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಬದುಕು ಮತ್ತು ಹೋರಾಟ ಕುರಿತು ಅವರು ಮಾತನಾಡುತಿದ್ದರು.
ಅಂಬೇಡ್ಕರ್ ಹಿಂದು ವಿರೋಧಿ ಎಂಬ ತಪ್ಪು ಕಲ್ಪನೆಗಳಿವೆ. ಕೋಮುವಾದಿ ಆಗುವುದಕ್ಕೂ ಧಾರ್ಮಿಕನಾಗು ವುದಕ್ಕೂ ಬಹಳ ವ್ಯತ್ಯಾಸ ಇದೆ. ಧಾರ್ಮಿಕ ನಾಗುವುದು ತಪ್ಪಲ್ಲ. ಆದರೆ ಕೋಮುವಾದಿ ಆಗುವುದು ಅಪರಾಧ. ಅಂಬೇಡ್ಕರ್ ಒಬ್ಬ ಧಾರ್ಮಿಕ ಮನುಷ್ಯ ಆಗಿದ್ದರು. ಹಿಂದು ಧರ್ಮದ ಸುಧಾರಣೆಗೆ ಪ್ರಯತ್ನ ಪಟ್ಟಿದ್ದ ಅವರು, ಹಿಂದು ಧರ್ಮ ಸುಧಾರಣೆ ಆಗದಿದ್ದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಹೇಳಿದ್ದರು. ಅದು ಇಂದು ನಮ್ಮ ಕಣ್ಣೇದುರಿಗೆ ನಿಜ ಆಗುತ್ತಿದೆ ಎಂದರು.
ಕೋಮುವಾದದ ಬಲಿಪಶುಗಳು
1991ರಲ್ಲಿ ನಮ್ಮ ದೇಶಕ್ಕೆ ಹೊಸ ಆರ್ಥಿಕ ನೀತಿ ಮತ್ತು ಬ್ರಾಹ್ಮಣವಾದ ಒಟ್ಟಿಗೆ ಪ್ರವೇಶಿಸಿತು. ಅದು ಇಂದು ಬಂಡವಾಳವಾದ ಹಾಗೂ ಕೋಮುವಾದದ ರೂಪ ಪಡೆದುಕೊಂಡಿದೆ. ಇವು ಎರಡರ ಬಲಿಪಶುಗಳು ಬಡವರು, ದಲಿತರು, ಹಿಂದುಳಿದವರ್ಗದವಾರದೆ, ಇದನ್ನು ಲಾಭ ಪಡೆದವರು ಕೇವಲ ಒಂದು ವರ್ಗ ದವರು ಮಾತ್ರ. ಅಂಬೇಡ್ಕರ್ ಇದನ್ನು ಅಂದೇ ಹೇಳಿದ್ದರು. ಆದರೆ ಗಾಂಧೀಜಿ ಸೇರಿದಂತೆ ನಾವು ಯಾರು ಅದಕ್ಕೆ ಕಿವಿಗೋಡಲಿಲ್ಲ ಎಂದು ಅವರು ತಿಳಿಸಿದರು.
ಇವತ್ತಿನ ಸಂವಿಧಾನ ಅಂಬೇಡ್ಕರ್ ಬಯಸಿದ ಸಂವಿಧಾನ ಅಲ್ಲ. ಬದಲು ಅನಿವಾರ್ಯವಾಗಿ ರಚಿಸಿದ ಸಂವಿಧಾನ. ಉದ್ಯಮ ಹಾಗೂ ಕೃಷಿ ಕ್ಷೇತ್ರದ ರಾಷ್ಟ್ರೀಕರಣ ಮತ್ತು ಚುನಾವಣಾ ಕ್ರಮದಲ್ಲಿ ಸುಧಾರಣೆ ಆಗಬೇಕು ಎಂದು ಅಂಬೇಡ್ಕರ್ ಬಯಸಿದ್ದರು. ಇದು ಸಂವಿಧಾನದಲ್ಲಿ ಬರುತ್ತಿದ್ದರೆ ನಮ್ಮ ದೇಶದ ಚಿತ್ರಣವೇ ಬದಲಾಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಮುಸ್ಲಿಮ್ ವಿರೋಧಿ ಅಲ್ಲ
ಅಂಬೇಡ್ಕರ್ ಮುಸ್ಲಿಮರಿಗೆ ವಿರೋಧವಾಗಿದ್ದ ತಪ್ಪು ಕಲ್ಪನೆಯನ್ನು ಬಿತ್ತಲಾಗುತ್ತಿದೆ. ಬಹಳಷ್ಟು ಕಡೆಗಳಲ್ಲಿ ಅಂಬೇಡ್ಕರ್ ಮುಸ್ಲಿಮ್ ಧರ್ಮದ ಬಗ್ಗೆ ಕಟುವಾಗಿ ಮಾತನಾಡಿರುವುದು ಸತ್ಯ. ಅದಕ್ಕಿಂತ ಕಟುವಾಗಿ ಹಿಂದು ಧರ್ಮದ ಬಗ್ಗೆ ಸ್ವಾಮಿ ವಿವೇಕಾನಂದರು, ಪೆರಿಯಾರ್, ನಾರಾಯಣಗುರು, ಕುವೆಂಪು ಮಾತನಾಡಿದ್ದಾರೆ. ಅದರ ಆಧಾರದಲ್ಲಿ ಇವರೆನ್ನೆಲ್ಲ ಹಿಂದು ವಿರೋಧಿಗಳು ಎಂದು ಹೇಳಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದ ಅವರು, ಧರ್ಮದ ಸುಧಾರಣೆಗಾಗಿ ಮಾತ ನಾಡಿದರೆ ಅದು ಧರ್ಮದ ವಿರೋಧಿ ಆಗುವುದಿಲ್ಲ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಸಂವಿಧಾನ ಪೀಠಿಕೆಯನ್ನು ವಾಚಿಸಿದರು. ಅಧ್ಯಕ್ಷತೆಯನ್ನು ಹಿರಿಯ ಚಿಂತಕ ಪ್ರೊ.ಕೆ.ಫಣಿರಾಜ್ ವಹಿಸಿದ್ದರು. ಬಾಲಕೃಷ್ಣ ಶೆಟ್ಟಿ, ವರೋನಿಕಾ ಕರ್ನೆಲಿಯೋ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಕೋಟ, ಹುಮೈರಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೈಸ್ತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಸ್ವಾಗತಿಸಿದರು. ಮಂಜುನಾಥ್ ಬಾಳ್ಕುದ್ರು ವಂದಿಸಿದರು. ಯಾಸೀನ್ ಕೋಡಿ ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.
ಸೀರೆ ಕಡ್ಡಾಯಗೊಳಿಸಿ ಕೋರ್ಟ್ ಮೆಟ್ಟಿಲೇರಿದರೆ...
ಹಿಜಾಬ್ ಕುರಿತು ತೀರ್ಪು ನೀಡಲು ಕೋರ್ಟ್ ತೆಗೆದುಕೊಂಡ ಮಾನದಂಡ ಸಂಪೂರ್ಣ ಸಂವಿಧಾನ ವಿರುದ್ಧವಾಗಿದೆ. ಹಿಜಾಬ್ ಹಾಕುವುದು ಬಿಡುವುದು ಸಂವಿಧಾನ ಆಧಾರದಲ್ಲಿ ನಡೆಯಬೇಕು ಎಂದು ನಾವು ಹೇಳಿದರೆ, ಕೋರ್ಟ್ ಅದಕ್ಕೆ ಧಾರ್ಮಿಕವಾಗಿ ಸ್ವಾತಂತ್ರ್ಯ ಇದೆಯೇ ಎಂಬುದನ್ನು ಎದುರಿಗೆ ತಂದಿತು. ಹೀಗೆ ಹಿಂದು ಯುವತಿಯರು ಜೀನ್ಸ್, ಟೀಶರ್ಟ್ ಹಾಕದೆ ಹಿಂದು ಧರ್ಮ ದಂತೆ ಸೀರೆ, ಬಳೆ, ಕುಂಕುಮ ಮಾತ್ರ ಹಾಕಬೇಕೆಂದು ಕೆಲವು ಸಂಘಟನೆಗಳು ವಾದಿಸಿದರೆ. ಆ ವಿವಾದ ಕೋರ್ಟ್ ಮೆಟ್ಟಿಲೇರಿದಾಗ, ಕೋರ್ಟ್ ಧರ್ಮ ಏನು ಹೇಳುತ್ತದೆ ಎಂಬ ವ್ಯಾಖ್ಯಾನಕ್ಕೆ ಹೊರಟರೆ. ಆಗ ಸೀರೆ ಕಡ್ಡಾಯ ಮಾಡಿದವರು ಸಂವಿಧಾನವನ್ನು ಮುಂದೆ ತರುವ ಬದಲು ಮನುಶಾಸ್ತ್ರವನ್ನು ತರುತ್ತಾರೆ. ಇದರಿಂದ ಹಿಂದು ಮಹಿಳೆಯರು ಊಹಿಸದ ಅಪಾಯವನ್ನು ಎದುರಿಸಬೇಕಾ ಗುತ್ತದೆ ಎಂದು ದಿನೇಶ್ ಅಮೀನ್ ಮಟ್ಟು ಆತಂಕ ವ್ಯಕ್ತಪಡಿಸಿದರು.
ಹಿಜಾಬ್ ವಿವಾದದ ವಿರುದ್ಧ ಹಿಂದು ವಿದ್ಯಾರ್ಥಿನಿಯರು, ಯುವತಿಯರು ಮಹಿಳೆಯರು ಪ್ರತಿಭಟನೆ ಮಾಡಬೇಕಾಗಿತ್ತು. ಯಾಕೆಂದರೆ ಇಂದು ಮುಸ್ಲಿಮ್ ವಿದ್ಯಾರ್ಥಿನಿಯರ ಕಡೆ ನೆಟ್ಟ ಬಾಣ ನಾಳೆ ನಮ್ಮ ವಿರುದ್ಧ ಕೂಡ ಬರಬಹುದು ಎಂಬ ಎಚ್ಚರಿಕೆ ಅವರಿಗೆ ಇರಬೇಕಿತ್ತು. ಇಂತಹದೊಂದು ದಿನ ಮುಂದೆ ಭಾರತ ದಲ್ಲಿ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.
ಸಂವಿಧಾನ ದುರ್ಬಲಗೊಳಿಸುವ ಯತ್ನ
ಕೆಲವು ಬಾರಿ ಈ ಸಂವಿಧಾನವನ್ನು ಬದಲಾಯಿಸುವ ಕೂಗು ಕೇಳಿಬರುತ್ತಿರುತ್ತದೆ. ಆದರೆ ಇವರು ಸಂವಿಧಾನವನ್ನು ಬದಲಾಯಿಸುವುದಿಲ್ಲ. ಅದರ ಬದಲು ಸಂವಿಧಾನಕ್ಕೆ ತಿದ್ದುಪಡಿ ಮಾಡುತ್ತ ನಿಷ್ಕ್ರೀಯ ಅಥವಾ ದುರ್ಬಲಗೊಳಿಸುತ್ತಾರೆ. ಮೀಸಲಾತಿ ನೀಡಬೇಕಾದರೆ ಕೇವಲ ಆರ್ಥಿಕ ಆಧಾರ ಮಾತ್ರವಲ್ಲ ಸಾಮಾಜಿಕ ಹಿನ್ನೆಲೆ ಕೂಡ ಮುಖ್ಯ ಎಂದು ಸಂವಿಧಾನ ಹೇಳುತ್ತದೆ. ಆದರೆ ಇಂದು ಸಂವಿಧಾನವನ್ನು ದಿಕ್ಕರಿಸಿ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಯನ್ನು ನೀಡ ಲಾಗಿದೆ ಎಂದು ದಿನೇಶ್ ಅಮೀನ್ ಮಟ್ಟು ಆರೋಪಿಸಿದರು.
ನಮ್ಮ ಸಂವಿಧಾನ ಬಹುತ್ವ, ಬಹುಜನ, ಬಹು ಸಂಸ್ಕೃತಿ, ಬಹುಭಾಷೆ, ಬಹು ಧರ್ಮದ ಬಗ್ಗೆ ಹೇಳುತ್ತದೆ. ಅದು ಬಿಟ್ಟು ಏಕ ಸಂಸ್ಕೃತಿ, ಏಕಜನಾಂಗ, ಏಕ ಧರ್ಮ, ಏಕಭಾಷೆ ಬಗ್ಗೆ ಮಾತನಾಡಲ್ಲ. ಹಾಗೆ ಮಾತನಾಡುವುದೇ ಸಂವಿಧಾನ ವಿರೋಧಿ ಆಗಿದೆ. ಈ ಸಂವಿಧಾನವನ್ನು ಉಳಿಸಲು ಪ್ರಯತ್ನ ಮಾಡುವುದು ಅಂಬೇಡ್ಕರ್ಗೆ ಕೊಡುವ ನಿಜವಾದ ಗೌರವ ಎಂದು ಅವರು ಹೇಳಿದರು.
''ಭಾರತದಲ್ಲಿ ಇಂದು ಕಾಣುವ ಹಿಂದು ಧರ್ಮ ಇದ್ದರೆ ಅದಕ್ಕೆ ಸ್ವಾಮಿ ವಿವೇಕಾನಂದರು, ನಾರಾಯಣ ಗುರುಗಳು, ಕುವೆಂಪು ಕಾರಣವೇ ಹೊರತು ಮೋಹನ್ ಭಾಗವತ್, ಕಲ್ಲಡ್ಕ ಪ್ರಭಾಕರ ಭಟ್ ಅಲ್ಲ. ಅವರೆಲ್ಲ ಕಾಲಕಾಲಕ್ಕೆ ಧರ್ಮವನ್ನು ಸುಧಾರಣೆ ಮಾಡಿರುವುದರಿಂದ ಹಿಂದು ಧರ್ಮ ಇಂದಿಗೂ ಬದುಕಿ ಉಳಿದಿದೆ. ಅದು ಬಿಟ್ಟು ಇಂದಿನ ಹಿಂದುತ್ವದ ಕೂಗಿನಿಂದಲ್ಲ''.
-ದಿನೇಶ್ ಅಮೀನ್ ಮಟ್ಟು