ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಹೆಚ್ಚಿನ ತನಿಖೆಗಾಗಿ ಎರಡು ವಿಶೇಷ ತಂಡ ರಚನೆ

ಸಂತೋಷ್ ಪಾಟೀಲ್
ಉಡುಪಿ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪ್ರಕರಣದ ತನಿಖಾಧಿಕಾರಿಯಾಗಿದ್ದು, ಮಲ್ಪೆ ವೃತ್ತ ನಿರೀಕ್ಷಕ ಶರಣಗೌಡ ಪಾಟೀಲ್ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಎರಡು ವಿಶೇಷ ತಂಡ ರಚಿಸಲಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ದನ್ ತಿಳಿಸಿದ್ದಾರೆ.
ಸಂತೋಷ್ ಪಾಟೀಲ್ ಜೊತೆ ಲಾಡ್ಜ್ನಲ್ಲಿದ್ದ ಇಬ್ಬರು ಗೆಳೆಯರಾದ ಪ್ರಶಾಂತ್ ಶೆಟ್ಟಿ ಹಾಗೂ ಸಂತೋಷ್ ಮಡಿಕೇರಿ ಅವರ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಜನಪ್ರತಿನಿಧಿಯೊಬ್ಬರು ಆರೋಪಿಯಾಗಿರುವುದರಿಂದ ಈ ಕುರಿತ ವರದಿಯನ್ನು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲ ಯಕ್ಕೆ ಸಲ್ಲಿಸಲಾಗಿದೆ ಎಂದರು.
ತಂಡ ಬೆಳಗಾವಿಗೆ: ಎರಡು ತಂಡಗಳ ಪೈಕಿ ಒಂದು ತಂಡ ತನಿಖೆಗಾಗಿ ಬೆಳಗಾವಿಗೆ ತೆರಳಿದೆ ಎನ್ನಲಾಗಿದೆ. ಇನ್ನೊಂದು ತಂಡ ಉಡುಪಿ ಯಲ್ಲಿಯೇ ತಾಂತ್ರಿಕವಾಗಿ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಎರಡು ದಿನಗಳ ಕಾಲ ಪೊಲೀಸ್ ವಶದಲ್ಲಿದ್ದ ಮೃತರ ಗೆಳೆಯರಾದ ಪ್ರಶಾಂತ್ ಶೆಟ್ಟಿ ಹಾಗೂ ಸಂತೋಷ್ ಅವರ ವಿಡಿಯೋ ಹೇಳಿಕೆಯನ್ನು ಇಂದು ಉಡುಪಿ ನಗರ ಠಾಣೆಯಲ್ಲಿ ಪಡೆದುಕೊಳ್ಳಲಾಗಿದೆ. ಎಫ್ಐಆರ್ನಲ್ಲಿರುವ ಎಲ್ಲ ಅಂಶಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಿಸಿಟಿವಿ ದೃಶ್ಯ ಸಂಗ್ರಹ: ತನಿಖೆ ಚುರುಕುಗೊಳ್ಳುತ್ತಿದ್ದಂತೆ ಪೊಲೀಸರು, ಲಾಡ್ಜ್ ಸೇರಿದಂತೆ ಅಗತ್ಯ ಇರುವ ಕಡೆಗಳಲ್ಲಿನ ಸಿಸಿಟಿವಿ ಫುಟೇಜ್, ವಾಟ್ಸಾಪ್ ಸಂದೇಶಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.
ಅದೇ ರೀತಿ ಲಾಡ್ಜ್ ರೂಮಿನ ಡಸ್ಟ್ಬಿನ್ನಲ್ಲಿ ಪತ್ತೆಯಾಗಿರುವ ವಿಷದ ಬಾಟಲಿಯನ್ನು ವಶಪಡಿಸಿಕೊಂಡಿದ್ದು, ಅದು ಎಲ್ಲಿ ಖರೀದಿಸಿರುವ ಬಗ್ಗೆಯೂ ಪೊಲೀಸರು ಮಾಹಿತಿ ಕಳೆ ಹಾಕುತ್ತಿದ್ದಾರೆ.
ಇನ್ನೊಂದೆಡೆ ಮಂಗಳೂರು ಹಾಗೂ ಮಣಿಪಾಲದ ವಿಧಿ ವಿಜ್ಞಾನ ಪ್ರಾಯೋ ಗಾಲಯದ ತಂಡ, ನಿನ್ನೆ ಲಾಡ್ಜ್ ಮತ್ತು ಕಾರಿನಿಂದ ಸಂಗ್ರಹಿಸಿರುವ ಮಾದರಿಗಳ ಪರೀಕ್ಷೆಗಳನ್ನು ಕೂಡ ನಡೆಸುತ್ತಿದೆ. ಮರಣೋತ್ತರ ಪರೀಕ್ಷೆ ನಡೆದಿದ್ದು, ಎರಡು ಮೂರು ದಿನಗಳೊಳಗೆ ವರದಿ ಕೈಸೇರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







