ದಾಳಿ ವೇಳೆ ಸ್ಥಳವನ್ನು ತಲುಪಿದ್ದರೂ ಆರೋಪಿಗಳು ಪಾರಾಗಲು ಅವಕಾಶ ನೀಡಿದ್ದ ದಿಲ್ಲಿ ಪೊಲೀಸರು; ಎಫ್ಐಆರ್ ನಲ್ಲಿ ಉಲ್ಲೇಖ
'ಗೋರಕ್ಷಕ'ರಿಂದ ವ್ಯಕ್ತಿಯ ಹತ್ಯೆ ಪ್ರಕರಣ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದಿಲ್ಲಿಯ ದ್ವಾರಕಾದಲ್ಲಿ ಗೋಹತ್ಯೆ ಶಂಕೆಯಲ್ಲಿ ವ್ಯಕ್ತಿಯೋರ್ವನನ್ನು ಥಳಿಸಿ ಹತ್ಯೆಗೈದಿರುವ ಪ್ರಕರಣದಲ್ಲಿ ದಾಖಲಾಗಿರುವ ಎಫ್ಐಆರ್ ನಲ್ಲಿ ದಾಳಿ ವೇಳೆ ಪೊಲೀಸರು ಸ್ಥಳವನ್ನು ತಲುಪಿದ್ದರೂ ಹಲ್ಲೆಕೋರರು ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಲಾಗಿದೆ ಎಂದು The Indian Express ವರದಿ ಮಾಡಿದೆ.
ದ್ವಾರಕಾದ ತೋಟದ ಮನೆಯೊಂದರಲ್ಲಿ ಸೋಮವಾರ ರಾತ್ರಿ 10ರಿಂದ 15 ಜನರ ಗುಂಪು ಗೋಹತ್ಯೆಯ ಆರೋಪದಲ್ಲಿ ರಾಜಾರಾಮ (40) ಎಂಬಾತನ ಮೇಲೆ ತೀವ್ರ ಹಲ್ಲೆ ನಡೆಸಿತ್ತು. ರಾಜಾರಾಮ ತೋಟದ ಮನೆಯ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದು, ಜೊತೆಗೆ ಸ್ಥಳೀಯರಿಗೆ ಹಾಲು ಮಾರಾಟದಲ್ಲಿಯೂ ತೊಡಗಿಕೊಂಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ರಾಜಾರಾಮ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರೆ, ಆತನೊಂದಿಗೆ ಹಲ್ಲೆಗೊಳಗಾಗಿದ್ದ ಆರು ಸಹಚರರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎರಡು ಎಫ್ಐಆರ್ ಗಳನ್ನು ದಾಖಲಿಸಿಕೊಂಡಿದ್ದಾರೆ. ಒಂದು ಹಲ್ಲೆಯ ಕುರಿತಾಗಿದ್ದರೆ ಇನ್ನೊಂದು ಗೋಹತ್ಯೆ ಆರೋಪಕ್ಕೆ ಸಂಬಂಧಿಸಿದೆ. ಹಲ್ಲೆ ಪ್ರಕರಣದಲ್ಲಿ ಯಾರನ್ನೂ ಬಂಧಿಸಲಾಗಿಲ್ಲ, ಗೋ ಹತ್ಯೆಗಾಗಿ ಐವರನ್ನು ಬಂಧಿಸಲಾಗಿದೆ ಎಂದು The Indian Express ವರದಿ ಮಾಡಿದೆ.
ದ್ವಾರಕಾದ ಛಾವಲಾ ಪ್ರದೇಶದಲ್ಲಿ ಗುಂಪೊಂದು ಗೋವುಗಳ ಹತ್ಯೆಯಲ್ಲಿ ತೊಡಗಿದೆ ಎಂಬ ಮಾಹಿತಿ ಸೋಮವಾರ ನಸುಕಿನ ಎರಡು ಗಂಟೆಯ ಸುಮಾರಿಗೆ ಪೊಲೀಸರಿಗೆ ಲಭಿಸಿತ್ತು. ಆದರೆ ಪೊಲೀಸರು ತೋಟದ ಮನೆಯನ್ನು ತಲುಪುವ ಮುನ್ನವೇ ಹಲ್ಲೆಯ ಕುರಿತು ಮಾಹಿತಿ ಪೊಲೀಸ್ ನಿಯಂತ್ರಣ ಕೊಠಡಿಗೆ ಸಿಕ್ಕಿತ್ತು. ಪೊಲೀಸರು ಸ್ಥಳವನ್ನು ತಲುಪಿದಾಗ ಸುಮಾರು 10-15 ಜನರು ಅಲ್ಲಿದ್ದರು ಎಂದು ಗುರುತು ಹೇಳಿಕೊಳ್ಳಲು ಬಯಸದ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ಆದರೆ ಗೋ ಹತ್ಯೆ ಕುರಿತು ದಾಖಲಾಗಿರುವ ಎಫ್ಐಆರ್ ನಲ್ಲಿ, ಸ್ಥಳದಲ್ಲಿ ಎಂಟು ಆಕಳುಗಳು ಮತ್ತು ಎರಡು ಕರುಗಳಿದ್ದು, ಅವುಗಳನ್ನು ಗೋಶಾಲೆಗೆ ಸ್ಥಳಾಂತರಿಸಲಾಗಿದೆ. ಬಳಿಕ ಅಲ್ಲಿದ್ದ ‘ಗೋ ರಕ್ಷಾ ದಳ’ದ ಸದಸ್ಯರು ಪೊಲೀಸರಿಗೆ ತಮ್ಮ ಹೆಸರುಗಳನ್ನು ನೀಡದೇ ಅಲ್ಲಿಂದ ತೆರಳಿದ್ದರು ಎಂದು ಹೇಳಲಾಗಿದೆ ಎಂದು The Indian Express ವರದಿ ಮಾಡಿದೆ.
ಕೊಲ್ಲಲಾಗಿದ್ದ ಆಕಳುಗಳ ರುಂಡಗಳು ಮತ್ತು ಇತರ ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಫ್ಐಆರ್ ನಲ್ಲಿ ತಿಳಿಸಲಾಗಿದೆ.
ವಿಷಯದ ತನಿಖೆಗಿಂತ ರಾಜಾರಾಮ ಮತ್ತು ಇತರ ಗಾಯಾಳುಗಳನ್ನು ಆಸ್ಪತ್ರಗೆ ಒಯ್ಯಲು ತಾವು ಆದ್ಯತೆ ನೀಡಿದ್ದೆವು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ತೋಟದ ಮನೆಯ ನಿಖರವಾದ ವಿಳಾಸವನ್ನು ತಾನು ನೀಡಿರಲಿಲ್ಲ, ಹೀಗಾಗಿ ಪೊಲೀಸರು ಸ್ಥಳವನ್ನು ತಲುಪಲು ಸುಮಾರು 45 ನಿಮಿಷಗಳನ್ನು ತೆಗೆದುಕೊಂಡಿದ್ದರು ಎಂದು ಗೋಹತ್ಯೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದ ಪ್ರಾಣಿಪ್ರೇಮಿ ಕಾರ್ಯಕರ್ತ ಸುಮಂತ ಓಝಾ ತಿಳಿಸಿದರು.
‘ಅಪರಾಧದ ವರದಿ ನೀಡುವುದು ನಮ್ಮ ಕೆಲಸ, ಅಪರಾಧವನ್ನು ಎಸಗುವುದಲ್ಲ. ಗೋವುಗಳನ್ನು ಕೊಲ್ಲುವುದು ಅಪರಾಧ ನಿಜ, ಆದರೆ ಅದರಲ್ಲಿ ಭಾಗಿಯಾಗಿದ್ದವರನ್ನು ಥಳಿಸುವುದು ಸರಿಯಲ್ಲ’ ಎಂದರು. ಈ ನಡುವೆ ದ್ವಾರಕಾದ ಡಿಸಿಪಿ ಶಂಕರ ಚೌಧರಿಯವರು, ರಾಜಾರಾಮ ಹತ್ಯೆ ಆರೋಪಿಗಳ ಬಂಧನಕ್ಕಾಗಿ ದಿಲ್ಲಿಯ ವಿವಿಧ ಭಾಗಗಳಿಗೆ ತಂಡಗಳನ್ನು ಕಳುಹಿಸಲಾಗಿದೆ ಎಂದು The Indian Expressಗೆ ತಿಳಿಸಿದ್ದಾರೆ.







