ಎ.16ರಿಂದ ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್‌ನ ಜನತಾ ಜಲಧಾರೆ ರಥಯಾತ್ರೆ
ಸೌಪರ್ಣಿಕ, ವಾರಾಹಿ, ಸೀತಾನದಿಯಿಂದ ಜಲಸಂಗ್ರಹ
ಉಡುಪಿ : ೨೦೨೩ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ರಿಸಿಕೊಂಡು ಜಾತ್ಯತೀತ ಜನತಾದಳ ರಾಜ್ಯಾದ್ಯಂತ ನಡೆಸಲಿರುವ ‘ಜನತಾ ಜಲಧಾರೆ’ ರಥಯಾತ್ರೆ ಎ.೧೬ರಿಂದ ೧೮ರವರೆಗೆ ಉಡುಪಿ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಜೆಡಿಎಸ್‌ನ ಜಿಲ್ಲಾಧ್ಯಕ್ಷ ಯೋಗೇಶ್ ವಿ.ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಗೇಶ್ ಶೆಟ್ಟಿ, ರಾಜ್ಯದ ಸಮಗ್ರ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗೆ ಆದ್ಯತೆ ನೀಡುವ, ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಕಾಯಕಲ್ಪ ನೀಡುವ ಸಂಕಲ್ಪದೊಂದಿಗೆ ರಾಜ್ಯದ ಪ್ರಮುಖ ನದಿಗಳಿಂದ ೯೪ ಸ್ಥಳಗಳಲ್ಲಿ ಜನಸಂಗ್ರಹಣೆ ನಡೆಯಲಿದ್ದು, ಅವುಗಳನ್ನು ಕಲಶದಲ್ಲಿ ಜಲಯಾತ್ರೆಯ ಮೂಲಕ ಬೆಂಗಳೂರಿಗೆ ಕೊಂಡೊಯ್ಯ ಲಾಗುವುದು ಎಂದರು.
ರಾಜ್ಯದ ಒಟ್ಟು ೧೫ ಕಡೆಗಳಿಂದ ಈ ರಥಯಾತ್ರೆ ಹೊರಡಲಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿ ಈ ಜಲಯಾತ್ರೆ ಎ.೧೬ರಂದು ಕೊಲ್ಲೂರಿನಲ್ಲಿ ಸೌಪರ್ಣಿಕಾ ನದಿಯಿಂದ ಕಲಶದಲ್ಲಿ ನೀರು ಸಂಗ್ರಹಿಸುವ ಮೂಲಕ ಪ್ರಾರಂಭಗೊಳ್ಳಲಿದೆ. ಉಡುಪಿ ಜಿಲ್ಲೆಯಲ್ಲಿ ಸೌಪರ್ಣಿಕ, ವಾರಾಹಿ, ಸೀತಾನದಿಗಳಿಂದ ಹಾಗೂ ದಕ್ಷಿಣ ಕನ್ನಡದಲ್ಲಿ ಶಾಂಭವಿ ನದಿ, ನೇತ್ರಾವತಿ ಹಾಗೂ ಕುಮಾರಧಾರ ನದಿಗಳಿಂದ ಜಲಸಂಗ್ರಹಣೆ ನಡೆಯಲಿದೆ ಎಂದರು.
ಎ.೧೬ರ ಬೆಳಗ್ಗೆ ೧೧ಗಂಟೆಗೆ ಸೌಪರ್ಣಿಕ ನದಿಯಿಂದ ನೀರನ್ನು ಸಂಗ್ರಹಿಸಿದ ಬಳಿಕ ಎರಡನೇ ದಿನ ಸೌಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ವಾರಾಹಿ ನದಿ ನೀರನ್ನು ಮೂರನೇ ದಿನ ಕಾರ್ಕಳದ ಕುಚ್ಚೂರು ಬಳಿ ಸೀತಾನದಿಯನ್ನು ಸಂಗ್ರಹಿಸಲಾಗುತ್ತದೆ. ೧೮ರಂದು ಈ ರಥಯಾತ್ರೆ ಕಾಪು ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿ ಅಲ್ಲಿನ ಮೂರು ನದಿಗಳಿಂದ ಜಲ ಸಂಗ್ರಹಿಸಿ ಬೆಂಗಳೂರಿಗೆ ತೆರಳಲಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ನೀರು ಸಂಗ್ರಹಿಸಿಕೊಂಡು ಜಲಧಾರೆ ಬೆಂಗಳೂರಿನಲ್ಲಿ ಸೇರಲಿದ್ದು, ಅಲ್ಲಿ ಐದು ಲಕ್ಷ ಜನರನು ಸೇರಿಸಿ ಬೃಹತ್ ಸಮಾವೇಶವೊಂದನ್ನು ಆಯೋಜಿಸಲಾಗುವುದು ಎಂದು ಯೋಗೇಶ್ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ನ ಜಿಲ್ಲಾ ಕಾರ್ಯಾಧ್ಯಕ್ಷ ವಾಸುದೇವ ರಾವ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಪರ್ಕಳ, ಜಿಲಾಲ ಕಾರ್ಯದರ್ಶಿ ಜಯರಾಮ ಆಚಾರ್ಯ, ಯುವ ಜನತಾ ದಳದ ಸಂಜಯ್, ಉದಯ ಶೆಟ್ಟಿ ಹಾಗೂ ಆದಿತ್ಯ ಉಪಸ್ಥಿತರಿದ್ದರು.







