ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕೇಸು, ಬಂಧನ ಆಗುವವರೆಗೂ ಹೋರಾಟ ನಿಲ್ಲದು: ಕಾಂಗ್ರೆಸ್

ಬೆಂಗಳೂರು, ಎ. 14: ‘ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದರೂ, ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್-13ರ ಅಡಿಯಲ್ಲಿ ಕೇಸು ದಾಖಲಿಸಬೇಕು. ಈಶ್ವರಪ್ಪರನ್ನು ಬಂಧಿಸುವವರೆಗೂ ನಮ್ಮ ಹೋರಾಟ ನಿಲ್ಲದು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಗುರುವಾರ ವಿಧಾನಸೌಧದ ಪೂರ್ವದ್ವಾರದಲ್ಲಿ 24 ಗಂಟೆ ಅಹೋರಾತ್ರಿ ಹೋರಾಟ ನಡೆಸುತ್ತಿದ್ದ ಉಭಯ ನಾಯಕರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಹೋರಾಟ ಕೇವಲ ರಾಜೀನಾಮೆಗೆ ಸೀಮಿತವಾಗಿಲ್ಲ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು' ಎಂದು ಆಗ್ರಹಿಸಿದರು.
‘ದೇಶದಲ್ಲಿನ ಕಾನೂನು ಎಲ್ಲರಿಗೂ ಒಂದೇ. ಸಂತೋಷ್ ವಾಟ್ಸ್ ಆ್ಯಪ್ ಸಂದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಸಂತೋಷ್ ಮೃತಪಟ್ಟ 36 ಗಂಟೆಯ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ್ದು, ತರಾತುರಿಯಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗಿದೆ. ಈಶ್ವರಪ್ಪ ನಾಳೆ(ಎ.15) ಸಂಜೆ ರಾಜೀನಾಮೆ ನೀಡುವ ಘೋಷಣೆ ಮಾಡಿದ್ದರೂ ಆತ ಸುಳ್ಳು ಕಂಪೆನಿಯ ಅಧ್ಯಕ್ಷ. ಅವರನ್ನು ನಂಬಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.
‘ಈಶ್ವರಪ್ಪ ಇದುವರೆಗೆ ಸುಳ್ಳು ಹೇಳಿತ್ತಿದ್ದರು. ನಮ್ಮ ಹೋರಾಟ ಚುರುಕಾದ ಮೇಲೆ ನಾಳೆ ಸಂಜೆ ರಾಜೀನಾಮೆ ಕೊಡುತ್ತೇನೆಂದಿದ್ದಾರೆ. ಈಶ್ವರಪ್ಪಗೆ ಅವರು ಮಾಡಿದ ತಪ್ಪು ಅರಿವಾಗಿದೆ. ಸಂತೋಷ್ ಯಾರು ಎಂದೇ ಗೊತ್ತೇ ಇಲ್ಲ ಎಂದಿದ್ದರು, ಗೊತ್ತಿಲ್ಲದೆ ಸಂತೋಷ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೇಗೆ ಹಾಕಿದ್ದು. ಸಂತೋಷ್ ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ್ ಬಿಜೆಪಿ ವರಿಷ್ಠರಿಗೆ ಬರೆದ ಪತ್ರದಲ್ಲಿ ಕಾಮಗಾರಿ ಮಾಡಿದ ಬಿಲ್ ಪಾವತಿ ಮಾಡದೆ ಇದ್ದರೆ ಆತ್ಮಹತ್ಯೆ ಮಾತ್ರ ದಾರಿ ಎಂದು ಉಲ್ಲೇಖ ಮಾಡಿದ್ದರು' ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈಶ್ವರಪ್ಪಗೆ ರಕ್ಷಣೆ ನೀಡುತ್ತಿದ್ದು, ಸಂತೋಷ್ ಕುಟುಂಬಕ್ಕೆ 1 ಕೋಟಿ ರೂ.ಪರಿಹಾರ ಕೊಡಬೇಕು. ಸಂತೋಷ್ ಪತ್ನಿಗೆ ಸರಕಾರಿ ನೌಕರಿ ಕೊಡಬೇಕು. ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿಲ್ಲದು. ಎ.16ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಪ್ರಕಟಿಸಿದರು.







