ಕರಾವಳಿಯಲ್ಲಿ ಕ್ರೈಸ್ತರಿಂದ ಪವಿತ್ರ ಗುರುವಾರ ಆಚರಣೆ

ಮಂಗಳೂರು : ಕರಾವಳಿಯಲ್ಲಿ ಕ್ರೈಸ್ತರು ಇಂದು ಪವಿತ್ರ ಗುರುವಾರವನ್ನು ಆಚರಿಸಿ ಯೇಸು ಕ್ರಿಸ್ತರ ಕೊನೆಯ ಭೋಜನದ ದಿನವನ್ನು ಸ್ಮರಿಸಿದರು. ಆಚರಣೆಯ ಭಾಗವಾಗಿ ಚರ್ಚ್‌ಗಳಲ್ಲಿ ಮತ್ತು ಇತರ ಕ್ರೈಸ್ತ ಪ್ರಾರ್ಥನಾ ಮಂದಿರಗಳಲ್ಲಿ ಗುರುವಾರ ಸಂಜೆ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆಗಳು ನಡೆಯಿತು.
ಮಂಗಳೂರಿನ ಬಿಷಪ್ ಅತಿ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಕಾಸರಗೋಡು ಜಿಲ್ಲೆಯ ಮಣಿಯಂಪಾರೆ ಸೈಂಟ್ ಲಾರೆನ್ಸ್ ಚರ್ಚ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಚರ್ಚ್‌ನ ಧರ್ಮಗುರು ವಂ ನೆಲ್ಸನ್ ಡಿ ಅಲ್ಮೇಡಾ ಉಪಸ್ಥಿತರಿದ್ದರು.
ಎರಡು ಸಾವಿರ ವರ್ಷಗಳ ಹಿಂದೆ ಯೇಸು ಕ್ರಿಸ್ತರು ತಮ್ಮ ಕೊನೆಯ ಭೋಜನದ ಸಂದರ್ಭದಲ್ಲಿ ೧೨ ಮಂದಿ ಶಿಷ್ಯರ ಪಾದ ತೊಳೆದು ಸೇವೆಯ ಸಂಸ್ಕಾರವನ್ನು ಪ್ರತಿಪಾದಿಸಿದ್ದರು. ಅದರ ಸಂಕೇತವಾಗಿ ಮಣಿಯಂಪಾರೆ ಚರ್ಚ್‌ನಲ್ಲಿ ಬಿಷಪ್ ಹಾಗೂ ಇತರ ಚರ್ಚ್‌ಗಳಲ್ಲಿ ಸ್ಧಳೀಯ ಧರ್ಮಗುರುಗಳು ೧೨ ಜನ ಕ್ರೈಸ್ತರ ಪಾದಗಳನ್ನು ತೊಳೆದರು. ೧೨ ಮಂದಿಯ ಪೈಕಿ ೬ ಮಂದಿ ಮಹಿಳೆಯರಿದ್ದರು. ಜತೆಗೆ ಯುವಜನರಿಗೆ, ವಯಸ್ಕರಿಗೆ, ರೋಗಿಗಳಿಗೆ ಹಾಗೂ ಧಾರ್ಮಿಕ ವ್ಯಕ್ತಿಗಳಿಗೂ ಪ್ರಾತಿನಿಧ್ಯ ನೀಡಲಾಗಿತ್ತು.
ಕೊನೆಯ ಭೋಜನದ ಸಂದರ್ಭದಲ್ಲಿಯೇ ಯೇಸು ಕ್ರಿಸ್ತರು ಪರಮ ಪ್ರಸಾದದ ಸಂಸ್ಕಾರವನ್ನು ಹಾಗೂ ಧರ್ಮಗುರುಗಳ ದೀಕ್ಷಾ ಸಂಸ್ಕಾರವನ್ನೂ ಪ್ರಾರಂಭಿಸಿದ್ದ ಕಾರಣ ಗುರುವಾರ ಈ ಎರಡು ಸಂಸ್ಕಾರಗಳ ಸ್ಮರಣೆಯನ್ನೂ ಮಾಡಲಾಯಿತು.
ಈ ಸಂದರ್ಭ ಪ್ರವಚನ ನೀಡಿದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಯೇಸು ಕ್ರಿಸ್ತರು ಶಿಲುಬೆಯಲ್ಲಿ ಮರಣವನ್ನಪ್ಪುವ ಮುಂಚಿನ ದಿನ ಅಂದರೆ ಗುರುವಾರ ತನ್ನ ಶಿಷ್ಯಂದಿರ ಜತೆ ಕೊನೆಯ ಭೋಜನವನ್ನು ಮಾಡಿದ್ದರು. ರೊಟ್ಟಿಯನ್ನು ಮುರಿದು ತನ್ನ ಶರೀರ ಹಾಗೂ ಕಪ್‌ನಲ್ಲಿದ್ದ ದ್ರಾಕ್ಷಾ ರಸವನ್ನು ಎತ್ತಿಕೊಂಡು ಅದು ತನ್ನ ರಕ್ತ ಎಂದು ಹೇಳಿ ಅವೆರಡನ್ನೂ ಸೇವಿಸಲು ತನ್ನ ಶಿಷ್ಯರಿಗೆ ನೀಡಿದ್ದರು. ಈ ಮೂಲಕ ತನ್ನನ್ನು ತಾನು ಸರ್ವ ಜನರಿಗಾಗಿ ಸಮರ್ಪಿಸಿದ್ದರು. ತನ್ನ ಮರಣದ ಸ್ಮರಣೆಗಾಗಿ ಈ ಘಟನೆಯನ್ನು ನಿತ್ಯ ನಡೆಸುವಂತೆ ತನ್ನ ಶಿಷ್ಯಂದಿರಿಗೆ ಹೇಳಿದ್ದರು. ಜಗತ್ತಿನಾದ್ಯಂತ ಪವಿತ್ರ ಬಲಿ ಪೂಜೆಯ ವೇಳೆ ಯೇಸು ಕ್ರಿಸ್ತರ ಮರಣ ಮತ್ತು ಪುನರುತ್ಥಾನವನ್ನು ಸ್ಮರಿಸಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಪವಿತ್ರ ಗುರುವಾರ ಮೂರು ವಿಷಯಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಪ್ರಥಮವಾಗಿ ಯೇಸು ಕ್ರಿಸ್ತರು ಪರಮ ಪ್ರಸಾದದ ಸಂಸ್ಕಾರವನ್ನು ಈ ದಿನದಂದು ಆರಂಭಿಸಿದರು ಹಾಗೂ ಅದನ್ನು ಪುನರಪಿ ನಡೆಸುವಂತೆ ಸೂಚಿಸಿದರು. ಅದರ ಪ್ರಕಾರ ಪ್ರತಿ ಪವಿತ್ರ ಬಲಿ ಪೂಜೆಯಲ್ಲಿ ಇದನ್ನು ನಡೆಸಲಾಗುತ್ತದೆ. ಜತೆಗೆ ಗುರು ದೀಕ್ಷೆಯ ಸಂಸ್ಕಾರವನ್ನು ಯೇಸು ಕ್ರಿಸ್ತರು ಈ ದಿನದಂದು ನೆರವೇರಿಸಿದ್ದರು. ಎರಡನೇಯದಾಗಿ ತನ್ನ ೧೨ ಮಂದಿ ಶಿಷ್ಯರ ಪಾದ ತೊಳೆದು ಸೇವೆಯ ಸಂಸ್ಕಾರಕ್ಕೆ ನಾಂದಿ ಹಾಡಿದರು. ಮೂರನೇಯದಾಗಿ ‘ನಾನು ನಿಮ್ಮನ್ನು ಪ್ರೀತಿಸಿ ದಂತೆ ನೀವು ಪರಸ್ಪರ ಪ್ರೀತಿಸಬೇಕು’ ಎಂಬ ಹೊಸ ಉಪದೇಶವನ್ನು ಅಂದು ನೀಡಿದ್ದರಲ್ಲದೆ ಇದು ಭ್ರಾತೃತ್ವದ ಭಾವನೆಯ ಸಂಕೇತವಾಗಿದೆ ಎಂದಿದ್ದರು.