ಶೀತಲೀಕರಣ ವ್ಯವಸ್ಥೆಯುಳ್ಳ ಬಾಹ್ಯಾಕಾಶ ದಿರಿಸು ಅಭಿವೃದ್ಧಿ: ನಾಸಾ ಘೋಷಣೆ

ವಾಷಿಂಗ್ಟನ್, ಎ.14: ಭವಿಷ್ಯದಲ್ಲಿ ಚಂದ್ರಯಾನ ಕೈಗೊಳ್ಳುವ ಗಗನಯಾತ್ರಿಗಳನ್ನು ಸೂರ್ಯನ ಕಿರಣಗಳಿಂದ ರಕ್ಷಿಸುವ ಉದ್ದೇಶದಿಂದ ಶೀತಲೀಕರಣ ವ್ಯವಸ್ಥೆಯುಳ್ಳ ಹೊಸ ಬಾಹ್ಯಾಕಾಶ ದಿರಿಸನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸ(ನ್ಯಾಷನಲ್ ಏರೊನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್) ಹೇಳಿದೆ.
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳು ಶೀತಲೀಕರಣ ವ್ಯವಸ್ಥೆಯುಳ್ಳ ಈ ದಿರಿಸನ್ನು ಧರಿಸಿ ಪರೀಕ್ಷೆ ನಡೆಸುತ್ತಿರುವ ವೀಡಿಯೊವನ್ನು ನಾಸ ಬಿಡುಗಡೆಗೊಳಿಸಿದೆ. ಬಾಹ್ಯಾಕಾಶದಲ್ಲಿ ತಂಪಾಗಿ ಇರುವುದು ಎಂಬ ಶೀರ್ಷಿಕೆಯನ್ನು ಈ ವೀಡಿಯೊಗೆ ನೀಡಲಾಗಿದೆ. ದಿರಿಸಿನಲ್ಲಿ ಅಳವಡಿಸಿರುವ ಟ್ಯೂಬ್‌ಗೆ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಸಾಧನದಿಂದ ತಣ್ಣಗಿನ ನೀರು ನಿರಂತರ ಹರಿದು ಬರುವ ವ್ಯವಸ್ಥೆ ಮಾಡಲಾಗಿದೆ. ಬಾಹ್ಯಾಕಾಶ ದಿರಿಸಿನ ಮೇಲಿನ ಈ ಹೆಚ್ಚುವರಿ ಪದರವನ್ನು ನಾಸಾ ‘ದ್ರವ ಶೀತಲೀಕರಣ ವಾತಾಯನ ದಿರಿಸು’ ಎಂದು ಕರೆದಿದೆ. ಬಾಹ್ಕಾಕಾಶ ಯಾನಿಗಳ ಚಲನೆಯಿಂದ ಉಂಟಾಗುವ ಶಾಖವನ್ನು ಈ ದಿರಿಸು ಹೀರಿಕೊಳ್ಳುತ್ತದೆ.
ಚಂದ್ರನ ಮೇಲ್ಮೈಯಲ್ಲಿ ತಾಪಮಾನವು 250 ಡಿಗ್ರಿ ಫ್ಯಾರನ್‌ಹೀಟ್‌ಗೆ ತಲುಪಬಹುದು. ಬಾಹ್ಯಾಕಾಶ ತಂತ್ರಜ್ಞಾನ ವಾಣಿಜ್ಯ ಸಹಭಾಗಿತ್ವಕ್ಕೆ ತೆರೆದುಕೊಳ್ಳುವ ಈ ಸಂದರ್ಭದಲ್ಲಿ ಶೀತಲೀಕರಣ ವ್ಯವಸ್ಥೆಯುಳ್ಳ ದಿರಿಸನ್ನು ಅಂತರಿಕ್ಷ ಬಾಹ್ಯಾಕಾಶ ನಿಲ್ದಾಣದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ನಾಸ ಹೇಳಿದೆ.





