ಮಂಗಳೂರು: ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ನಾಮಕರಣ

ಮಂಗಳೂರು : ನಗರದ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ನಾಮಕರಣಕ್ಕೆ ಸರಕಾರ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಗುರುವಾರ ಅಧಿಕೃತವಾಗಿ ನಾಮಕರಣ ಮಾಡಿ ನೂತನ ವೃತ್ತಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ನಾಮಫಲಕ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆದವರು ನಾವು. ಅವರ ಹೆಸರನ್ನು ಇಲ್ಲಿನ ವೃತ್ತಕ್ಕೆ ಇಡಲು ನಿಶ್ಚಯಿಸಿರುವುದು ಕೇವಲ ಮಂಗಳೂರಿಗೆ ಮಾತ್ರವಲ್ಲ, ನಾಡಿಗೇ ಹೆಮ್ಮೆಯ ವಿಷಯವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಮಾನವಕುಲ ಜೀವಂತ ಇರುವವರೆಗೆ ನಾರಾಯಣಗುರುಗಳ ಆದರ್ಶಗಳೂ ಜೀವಂತವಾಗಿರುತ್ತವೆ. ನೂತನವಾಗಿ ನಿರ್ಮಾಣವಾಗಲಿರುವ ವೃತ್ತದಲ್ಲಿ ಗುರುಗಳ ಆದರ್ಶದ ವಾಕ್ಯಗಳನ್ನು ಕೆತ್ತಿಸುವ ಕೆಲಸವಾಗಲಿ ಎಂದರು.
ಶಾಸಕ ಡಿ.ವೇದವ್ಯಾಸ್ ಕಾಮತ್ ಮಾತನಾಡಿ, ಕುದ್ರೋಳಿ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ನಾಮಕರಣ ಮಾಡುವಂತೆ ಹಲವು ವರ್ಷಗಳಿಂದ ಬೇಡಿಕೆ ಇದೆ. ಹಲವರ ವಿರೋಧವೂ ಇದೆ. ನಾನು ಶಾಸಕನಾಗಿ ಆಯ್ಕೆಯಾದ ಸಂದರ್ಭ ನಾರಾಯಣಗುರುಗಳ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಭರವಸೆ ನೀಡಿದ್ದೆ. ಅದರಂತೆ ದಿವಾಕರ ಪಾಂಡೇಶ್ವರ ಮೇಯರ್ ಆಗಿದ್ದಾಗ ಪಾಲಿಕೆಯಲ್ಲಿ ಕಾರ್ಯಸೂಚಿ ಮಂಡಿಸಿ ಒಪ್ಪಿಗೆ ಪಡೆದು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಇದೀಗ ಸರಕಾರದಿಂದ ಅನುಮೋದನೆ ಪಡೆದುಕೊಂಡಿದ್ದೇವೆ. ಮುಂದೆ ಈ ಪ್ರದೇಶದಲ್ಲಿ ನಾರಾಯಣಗುರು ಅವರ ಪುತ್ಥಳಿ ಇರುವ ಸುಂದರ ವೃತ್ತ ನಿರ್ಮಾಣವಾಗಲಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿದರು. ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್ ಸುಮಂಗಲಾ ರಾವ್, ಸ್ಥಳೀಯ ಕಾರ್ಪೊರೇಟರ್ ಸಂಧ್ಯಾ ಆಚಾರ್ಯ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ವಿವಿಧ ನಿಗಮಗಳ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್, ಸಂತೋಷ್ ಕುಮಾರ್ ರೈ, ನಿತಿನ್ ಕುಮಾರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಕುದ್ರೋಳಿ ದೇವಸ್ಥಾನದ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಉಪಸ್ಥಿತರಿದ್ದರು.