ಉಳ್ಳಾಲ: ಇಂಧನ ದರ ಇಳಿಕೆ, ಈಶ್ವರಪ್ಪ ಬಂಧನ ಒತ್ತಾಯಿಸಿ ಎಸ್ ಡಿಪಿಐ ಪ್ರತಿಭಟನೆ

ಉಳ್ಳಾಲ: ಗುತ್ತಿಗೆದಾರರ ಆತ್ಮಹತ್ಯೆಗೆ ಕಾರಣರಾದ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು, ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಮಂಗಳೂರು ವಿಧಾನಸಭಾ ಕ್ಷೇತ್ರ ಎಸ್ ಡಿಪಿಐ ಪ್ರತಿಭಟನಾ ಮೆರವಣಿಗೆ ನಡೆಸಿ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಪ್ರತಿಭಟನಾ ಸಭೆ ಗುರುವಾರ ನಡೆಸಿತು.
ಸಭೆಯನ್ನು ಉದ್ದೇಶಿಸಿ ಎಸ್ ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಝಾಕೀರ್ ಉಳ್ಳಾಲ ಮಾತನಾಡಿ, ದೇಶದಲ್ಲಿ ಜನರಿಗೆ ಅನ್ಯಾಯ, ಲೂಟಿ ಜಾಸ್ತಿ ಆಗುತ್ತಿದೆ. ಸಂತೋಷ್ ಆತ್ಮಹತ್ಯೆ ಇಡೀ ದೇಶವನ್ನೇ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ಇದಕ್ಕೆ ನೇರ ಕಾರಣ ಈಶ್ವರಪ್ಪ ಆಗಿದ್ದಾರೆ ಎಂದು ಸಂತೋಷ್ ರವರ ಪತ್ನಿ ಆರೋಪ ಮಾಡಿದ್ದಾರೆ. ಈ ಕಾರಣದಿಂದ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಟ್ಟು ಅವರನ್ನು ಬಂಧಿಸಬೇಕು.ಜನ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ಸರ್ಕಾರ ಬೆಲೆ ಇಳಿಕೆ ಮಾಡಿ ಜನರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿರೋಡ್ ಮಾತನಾಡಿ, ಜನವಿರೋಧಿ ಸರ್ಕಾರದ ಸಚಿವರಾಗಿರುವ ಈಶ್ವರಪ್ಪ ಈಗ ಕೊಲೆ ಆರೋಪಿ ಆಗಿ ಬಿಟ್ಟಿದ್ದಾರೆ.ಹಿಜಾಬ್ ವಿಷಯದಲ್ಲಿ ಆಗಾಗ ಮುಸ್ಲಿಮರಿಗೆ ಕಿರುಕುಳ ನೀಡುತ್ತಿದ್ದ ರಘುಪತಿ ಭಟ್ ರವರು ಸರ್ಕಾರ ಮತ್ತು ಈಶ್ವರಪ್ಪ ರ ಬಗೆ ಅರ್ಥ ಮಾಡಿಕೊಳ್ಳಬೇಕು. ಸರ್ಕಾರದ ಆಡಳಿತ, ಕಾನೂನು ಯಾವ ಮಟ್ಟದಲ್ಲಿ ಇದೆ ಎಂದು ಜನರಿಗೆ ಈಗ ಅರ್ಥವಾಗಿದೆ.ಇಂಧನ ದರ ಇಳಿಕೆ ಹಾಗೂ ಈಶ್ವರಪ್ಪ ವಜಾ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದರು.
ಝಾಹಿದ್ ಮಲಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಎಸ್ ಡಿಪಿಐ ಮುಖಂಡರಾದ ಅಬ್ಬಾಸ್ ಕಿನ್ಯ, ಅಸ್ಗರ್ ಅಲಿ,ಇಂತಿಯಾಝ್ ಕೋಟೆಪುರ, ಅಬ್ದುಲ್ ಲತೀಫ್ ಕೋಡಿಜಾಲ್, ಎ.ಆರ್.ಅಬ್ಬಾಸ್, ರವೂಫ್ ಉಳ್ಳಾಲ, ನಿಝಾಂ ಉಳ್ಳಾಲ ಇಂತಿಯಾಝ್ ಪಿಲಾರ್ ಮತ್ತಿತರರು ಉಪಸ್ಥಿತರಿದ್ದರು







