ಮಂಗಳೂರು: ಇಂಡಿಯಾನಾ ಆಸ್ಪತ್ರೆಯಲ್ಲಿ ಟ್ಯೂಮರ್ ಬಾಧಿತ ಬೆನ್ನೆಲುಬಿಗೆ ಸವಾಲಿನ ಶಸ್ತ್ರಚಿಕಿತ್ಸೆ

ಮಂಗಳೂರು : ನಗರದ ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಆರ್ಥೋಪೆಡಿಕ್ ಆಂಕೊಲಾಜಿ ವಿಭಾಗ ಮತ್ತು ಬೆನ್ನುಮೂಳೆ ಶಸ್ತ್ರಚಿಕಿತ್ಸೆ ವಿಭಾಗದ ಶಸ್ತ್ರಚಿಕಿತ್ಸಕರು ಕೆಳ ಬೆನ್ನುಮೂಳೆಯಲ್ಲಿ ಅಂಟಿಕೊಂಡಿದ್ದ ಮೃದು ಅಂಗಾಂಶದ ಗೆಡ್ಡೆಯೊಂದಿಗೆ ಬಂದಂತಹ 33 ವರ್ಷ ಪ್ರಾಯದ ರೋಗಿಯ ಮೇಲೆ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಈ ಕ್ಯಾನ್ಸರ್ ಕಾಯಿಲೆಯನ್ನು ನಿವಾರಿಸಲು 2-3 ಕಶೇರು ಖಂಡಗಳನ್ನು ಒಳಗೊಂಡಿರುವ ಬೆನ್ನುಮೂಳೆಯ ಪ್ರಮುಖ ಭಾಗ ಮತ್ತು ಆತನ ಸೊಂಟದ ಒಂದು ಭಾಗವನ್ನು ಒಳಗೊಂಡಿರುವ ಗೆಡ್ಡೆಯನ್ನು ತೆಗೆದುಹಾಕುವ ಅಗತ್ಯವಿತ್ತು. ಇಂತಹ ಶಸ್ತ್ರಚಿಕಿತ್ಸೆಗಳು ಸಾಮಾನ್ಯವಾಗಿ ಕೆಳ ಅಂಗದ ತಾತ್ಕಾಲಿಕ ಅಥವಾ ಶಾಶ್ವತ ಪಾರ್ಶ್ವ ವಾಯು, ಬೆನ್ನುಮೂಳೆಯ ಅಸ್ಥಿರತೆ ಮತ್ತು ಕೆಲವೊಮ್ಮೆ ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಅಸಾದ್ಯತೆ ಗಳಂತಹ ಅಪಾಯಗಳೊಂದಿಗೆ ಸಂಬಂಧಿಸಿವೆ.
ಇಂಡಿಯಾನಾ ಆಸ್ಪತ್ರೆಯ ಡಾ.ನವನೀತ್ ಎಸ್.ಕಾಮತ್ ಮತ್ತು ಡಾ.ಹಶೀರ್ ಸಫ್ವಾನ್ ನೇತೃತ್ವದ ತಜ್ಞ ಮೂಳೆ ಕ್ಯಾನ್ಸರ್ ಶಸ್ತ್ರಚಿಕಿತ್ಸಕರ ತಂಡ ಬೆನ್ನುಮೂಳೆಯ ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆದು ಹಾಕಲು ಸುದೀರ್ಘ 14 ಗಂಟೆಗಳ ಶಸ್ತ್ರಚಿಕಿತ್ಸೆಯನ್ನು ನಡೆಸಿದರು.
ರೋಗಿ ಚೇತರಿಸಿಕೊಂಡಿದ್ದಾರೆ. ಈ ಪ್ರಕರಣದ ಮುಖ್ಯ ಸಮಸ್ಯೆಯೆಂದರೆ ಬೆನ್ನುಹುರಿಗೆ ಸಂಭವನೀಯ ಹಾನಿ, ಬೆನ್ನುಮೂಳೆಯ ಸ್ಥಿರತೆಗೆ ಹಾನಿ ಮತ್ತು ಭಾರೀ ರಕ್ತಸ್ರಾವದ ಅಪಾಯಗಳೊಂದಿಗೆ ಪ್ರಯೋಗಿಸಬೇಕಾದಂತಹ ಕಷ್ಟಕರವಾದ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಇಂತಹ ಕ್ಯಾನ್ಸರ್ ಗೆಡ್ಡೆಗಳಿಗೆ ಶಸ್ತ್ರಚಿಕಿತ್ಸೆಯು ಮುಖ್ಯ ಚಿಕಿತ್ಸಾ ವಿಧಾನವಾಗಿದೆ ಮತ್ತು ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ವಿಫಲವಾದಲ್ಲಿ ರೋಗಿಯ ಬದುಕುಳಿಯುವ ಸಾಧ್ಯತೆ ಕಡಿಮೆಯಿದೆ ಎಂದು ಪ್ರಕಟನೆ ತಿಳಿಸಿದೆ.
ಇಂಡಿಯಾನಾ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸೆಯ ಸೂಪರ್ ಸ್ಪೆಷ್ಟಾಲಿಟಿ ವಿಭಾಗಗಳ ವಿಕಸನ ಮತ್ತು ಪೂರ್ವಭಾವಿ ಯೋಜನೆ ಹಾಗೂ ತಜ್ಞರ ತಂಡದಿಂದ ಉತ್ತಮ ಸಂಘಟಿತ ಕೆಲಸದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಆಥೋಪೆಡಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಜಲಾಲುದ್ದೀನ್ ಹೇಳಿದರು.
ಈ ಶಸ್ತ್ರಚಿಕಿತ್ಸೆಯ ತಂಡದಲ್ಲಿ ಡಾ. ವಿನಯ್ ಕುಮಾರ್ (ಸರ್ಜಿಕಲ್ ಆಂಕೊಲಾಜಿಸ್ಟ್), ಡಾ. ನಿಖಿಲ್ ಎಂ.ಪಿ. ಮತ್ತು ಡಾ. ಹರೀಶ್ ಬಿ.ಜಿ. (ಅರಿವಳಿಕೆ ತಜ್ಞರು) ಮತ್ತು ಡಾ. ನಿಖಿಲ್ ಶೆಟ್ಟಿ (ಪ್ಲಾಸ್ಟಿಕ್ ಸರ್ಜನ್) ಇದ್ದರು.
ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಯೂಸುಫ್ ಕುಂಬ್ಳೆ ಯಶಸ್ವಿ ಶಸ್ತ್ರಚಿಕಿತ್ಸೆಗಾಗಿ ತಂಡವನ್ನು ಅಭಿನಂದಿಸಿದ್ದಾರೆ.