ಸಿಎಂ ಬೊಮ್ಮಾಯಿ ಜಂಗಲ್ ರೂಲ್ ಆಡಳಿತ ನಡೆಸುತ್ತಿದ್ದಾರೆ: ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಆಕ್ರೋಶ

ಮೈಸೂರು,ಎ.14: ರಾಜ್ಯ ಸರ್ಕಾರ ಕಾನೂನು ಪರಿಪಾಲನೆಯಲ್ಲಿ ಸಂಪೂರ್ಣ ಕುಸಿತ ಕಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 'ಜಂಗಲ್ ರೂಲ್' ಆಡಳಿತ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 131 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರ ಕಾನೂನು ಪರಿಪಾಲನೆಯಲ್ಲಿ ಸಂಪೂರ್ಣ ಸೋತು ಹೋಗಿದೆ. ಕೋಮುವಾದಿ ಮನಸ್ಥಿತಿಯುಳ್ಳವರು ಎಲ್ಲಿಗೋ ನುಗ್ಗುವುದು ಗಲಾಟೆ ಮಾಡುವುದು ಮತ್ತು ಸಂವಿಧಾನ ಬಾಹಿರ ಕೆಲಸಗಳನ್ನು ಮಾಡುತ್ತಿರದ್ದರೂ ಮುಖ್ಯಮಂತ್ರಿಗಳು ಕಣ್ಣು ಬಾಯಿ ಮುಚ್ಚಿ ಕುಳಿತಿರುವುದು ದುರದೃಷ್ಟಕರ ಎಂದು ಕಡಿಕಾರಿದರು.
ಕೋಮು ಶಕ್ತಿಗಳು ಸಂವಿಧಾನವನ್ನು ಓದಿಕೊಂಡು ಧರ್ಮ ನಿರಪೇಕ್ಷಿತೆ ಮತ್ತು ಜಾತೀಯವಾದದ ಮೂಲಕ ಕೋಮುವಾದವನ್ನು ಹರಡುತ್ತಿದ್ದಾರೆ. ಸಂವಿಧಾನವನ್ನೇ ತಿಳಿಯದೆ ಇರುವವರು ಸೇರಿ ಇವತ್ತು ಹಿಂದೂ ಧರ್ಮದ ಹೆಸರಿನಲ್ಲಿ ಜಾತಿಯತೆ, ಅಸ್ಪøಶ್ಯತೆಯನ್ನು ಜೀವಂತವಾಗಿಟ್ಟು ಧರ್ಮದ ಹೆಸರಿನಲ್ಲಿ ಜನರನ್ನು ಒಡೆದು ಸಂವಿಧಾನಕ್ಕೆ ಸವಾಲುಗಳನ್ನು ಒಡ್ಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಗುತ್ತಿಗೆದಾರ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೆಸರನ್ನು ಬರೆದು ಆತ್ಮಹತ್ಯೆ ಮಾಡಕೊಂಡಿದ್ದರೂ ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಧಾರ್ಮಿಕ ಮತ್ತು ಅಲ್ಪಸಂಖ್ಯಾತ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಮೊದಲು ಸಚಿವ ಈಶ್ವರಪ್ಪ ಅವರ ರಾಜೀನಾಮೆ ಪಡೆದು ತನಿಖೆ ನಡೆಸಲಿ. ಇಲ್ಲದಿದ್ದರೆ ರಾಜ್ಯಪಾಲರು ಇವರನ್ನು ವಜಾಗೊಳಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಂಬೇಡ್ಕರ್ ಮಾನವ ಹಕ್ಕುಗಳ ಅಪ್ರತಿಮ ಹೋರಾಟಗಾರ ರಾಷ್ಟ್ರೀಯ ವಾದಿ ರಾಷ್ಟ್ರಪ್ರೇಮಿ, ದೇಶದ ಸರ್ವಾಂಗೀಣದ ಅಭಿವೃದ್ಧಿಗೆ ಬಹುತ್ವದ ರಾಷ್ಟ್ರದ ನಿರ್ಮಾಣ ಆಗಲು ಧರ್ಮ ನಿರಪೇಕ್ಷಿತ, ಜಾತ್ಯಾತೀತ ಸಮಾಜವಾದದ ಸಿದ್ಧಾಂತದ ಮೂಲಕ ಭಾರತದ ಎಲ್ಲಾ ಜನರನ್ನು ಒಗ್ಗೂಡಿಸಿ ಎಲ್ಲ ಜನರು ಸಂವಿಧಾನದ ಹಕ್ಕುಗಳನ್ನು ಅನುಭವಿಸಿ ಸೋದರತ್ವದಿಂದ ಬಾತೃತ್ವದಿಂದ ಬದುಕುವಂತೆ ನೀಡಿದಂತೆ ಮಹಾನ್ ಮಾನತಾವಾದಿ ಎಂದು ಬಣ್ಣಿಸಿದರು.
ಅವರ ನೆನಪು ಮತ್ತು ಅವರ ಸಂವಿಧಾನದ ಆಶಯಗಳು ಜಾರಿಯಾಗಲು ಯುವಜನತೆ ಶಿಕ್ಷಿತರು ಸಂವಿಧಾನ ಉಳಿಸಿ ಚಳುವಳಿಯ ಮುಖಾಂತರ ದೇಶವನ್ನು ಸಮೃದ್ಧ ನಾಡನ್ನಾಗಿ ಕಟ್ಟುವ ಕಂಕಣವನ್ನು ತೊಡಬೇಕು ಎಂದು ಹೇಳಿದರು.
ಸಂವಿಧಾನದ ಮೂಲ ಸಿದ್ಧಾಂತಗಳನ್ನು ಬದಲಾವಣೆ ಮಾಡಲು ಯಾರಿದಂಲೂ ಸಾಧ್ಯವಿಲ್ಲ, ಆದರೆ ಸವಾಲುಗಳಿವೆ. ಜನತೆ ಸವಾಲುಗಳನ್ನು ಹಿಮ್ಮೆಟ್ಟಿಸಿ ಸೋಲಿಸಿ ಜಾತಿಯತೆ, ಧರ್ಮನಿರಪೇಕ್ಷಿತ, ಬಾತೃತ್ವ ಸೋದರತ್ವವನ್ನು ಎತ್ತಿ ಹಿಡಿದು ಮತ್ತೊಮ್ಮೆ ಭಾರತ ಪ್ರಪಂಚದಲ್ಲಿ ಸಮೃದ್ಧಿಯಂತೆ ಬೆಳೆಯುವಂತೆ ಮಾಡಬೇಕು.
-ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ.







