ಕಾನೂನು ಬಾಹಿರವಾಗಿ ಅರಣ್ಯಭೂಮಿ ಒತ್ತುವರಿ ಮಾಡಿಲ್ಲ: ಗೂನಡ್ಕ ಮಸೀದಿಯ ಆಡಳಿತ ಸಮಿತಿ ಸ್ಪಷ್ಟನೆ
ಗೂನಡ್ಕ: ಬದ್ರಿಯಾ ಜುಮಾ ಮಸೀದಿ ಮತ್ತು ಮದ್ರಸ ಇರುವ ಕಟ್ಟಡಗಳು ಸಂಪಾಜೆಯ ಡಾ. ಕೀಲಾರು ಗೋಪಾಲ ಕೃಷ್ಣಯ್ಯರು ದಾನವಾಗಿ ನೀಡಿದ 11 ಸೆಂಟ್ಸ್ ಪಟ್ಟಾ ಸ್ಥಳದಲ್ಲಿದೆ. ಎ.ಸಿ.ಯವರು ನಮಗೆ ಕಾಯ್ದಿರಿಸಿದ 20 ಸೆಂಟ್ಸ್ ಸ್ಥಳದಲ್ಲಿ ದಫನ ಭೂಮಿಯಿದೆ. ನಾವು ಕಾನೂನು ಮೀರಿ ಅರಣ್ಯಭೂಮಿ ಒತ್ತುವರಿ ಮಾಡಿಕೊಂಡಿಲ್ಲ ಎಂದು ಗೂನಡ್ಕ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಸ್ಪಷ್ಟಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಡಳಿತ ಮಂಡಳಿಯ ಸದಸ್ಯ ಮಹಮ್ಮದ್ ಕುಂಞಿ ಗೂನಡ್ಕ ನಮ್ಮ ಮೇಲೆ ಆರೋಪ ಹೊರಿಸುತ್ತಿರುವ ಸ್ಥಳದ ಎಲ್ಲಾ ದಾಖಲೆ ಪತ್ರಗಳು ನಮ್ಮ ಕೈಯಲ್ಲಿ ಇವೆ. ಬದ್ರಿಯಾ ಜುಮಾ ಮಸೀದಿಗೆ ಸಂಬಂಧಿಸಿದ 20 ಸೆಂಟ್ಸ್ ಭೂಮಿಯ ಬಗ್ಗೆ ಅರಣ್ಯ ಇಲಾಖೆಯು ನೀಡಿರುವ ತೆರವು ಆದೇಶಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಲಭಿಸಿದೆ. ಈ ಹಿಂದೆ ಗೂನಡ್ಕ ಮಸೀದಿಗೆ ದಫನ ಭೂಮಿಯನ್ನು ಮಂಜೂರು ಮಾಡಲು ಪುತ್ತೂರು ಸಹಾಯಕ ಆಯುಕ್ತರು ಪ್ರಸ್ತಾವನೆ ಸಲ್ಲಿಸಿದ ಮೇರೆಗೆ 20 ಸೆಂಟ್ಸ್ ಸ್ಥಳ ಬದ್ರಿಯಾ ಜುಮಾ ಮಸೀದಿಗೆ ಕಾಯ್ದಿರಿಸಲಾಗಿದೆ, ಆ ಸಂದರ್ಭದಲ್ಲಿ ಕಂದಾಯ ಇಲಾಖೆ ಸಾರ್ವಜನಿಕ ಆಕ್ಷೇಪವನ್ನು ಆಹ್ವಾನಿಸಿದ್ದರೂ ಯಾವುದೇ ಆಕ್ಷೇಪಣೆ ನೀಡಿಲ್ಲ. ಅಲ್ಲದೆ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಕೂಡ ನಮಗೆ ದೊರಕಿದೆ ಎಂದು ಹೇಳಿದರು.
1977ರಲ್ಲಿ ದಿ.ಕೀಲಾರು ಗೋಪಾಲಕೃಷ್ಣಯ್ಯ ರವರು ದಾನವಾಗಿ ನೀಡಿದಂತಹ ಸರ್ವೆ ನಂಬರ್ 89/2ರ 0.11 ಎಕ್ರೆ ಸ್ಥಳದಲ್ಲಿ ಮಸೀದಿ ಮತ್ತು ಮದ್ರಸ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯು ನೋಟಿಸ್ ಜಾರಿಗೊಳಿಸಿ ಕೂಡಲೇ ತೆರವು ಗೊಳಿಸುವಂತೆ ಆದೇಶಿಸಿದ ವಿರುದ್ಧ ಮತ್ತು ಈ ಹಿಂದೆ ಎಸಿಎಫ್ ಮತ್ತು ಸಿಸಿಎಫ್ ನ್ಯಾಯಾಲಯದ ಆದೇಶದ ವಿರುದ್ಧ ರಿಟ್ ಪಿಟಿಶನ್ ಸಲ್ಲಿಸಿದ್ದರಿಂದ ಉಚ್ಚ ನ್ಯಾಯಾಲಯ ಆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಇಡೀ ರಾಜ್ಯದಾದ್ಯಂತ ಅರಣ್ಯ ಇಲಾಖೆಯಲ್ಲಿ ಈ ರೀತಿಯ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಸುಳ್ಯ ತಾಲೂಕಿನಲ್ಲಿ 700 ಮಿಕ್ಕಿ ಪ್ರಕರಣಗಳಿವೆ.
ಈಗಾಗಲೇ ಸುಳ್ಯ ತಾಲೂಕಿನಲ್ಲಿ ಹಲವು ದೈವ, ದೇವಸ್ಥಾನಗಳು ಎಕರೆಗಟ್ಟಲೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅನುಭವಿಸಿಕೊಳ್ಳುತ್ತಿದೆ. ಅಲ್ಲದೆ ಎಕರೆಗಟ್ಟಲೆ ಅರಣ್ಯ ಭೂಮಿಯು ಖಾಸಗಿ ವ್ಯಕ್ತಿಗಳ ಪಾಲಾಗಿದೆ. ತಾಲೂಕಿನಾದ್ಯಂತ ಇರುವ ಎಲ್ಲಾ ಒತ್ತುವರಿದಾರರ ವಿರುದ್ಧ ಸೆಕ್ಷನ್ 64 ಎ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಮತ್ತು ಈಗಾಗಲೇ ಆದೇಶವಾಗಿರುವ ನೂರಾರು ಒತ್ತುವರಿ ಪ್ರಕರಣಗಳನ್ನು ತೆರವುಗೊಳಿಸಿದಲ್ಲಿ ನಾವು ಕೂಡ ನಮ್ಮ 20 ಸೆಂಟ್ಸ್ ಭೂಮಿಯನ್ನು ಅರಣ್ಯ ಭೂಮಿ ಎಂದು ಸಾಬೀತಾದಲ್ಲಿ ನಮ್ಮ ಸ್ವಯಿಚ್ಛೆಯಿಂದ ತೆರವು ಮಾಡಲು ತಯಾರಿದ್ದೇವೆ ಎಂದು ಮಹಮ್ಮದ್ ಕುಂಞಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಸೀದಿ ಸಮಿತಿ ಅಧ್ಯಕ್ಷ ಹಾಜಿ ಪಿ ಎ ಅಬ್ದುಲ್ಲಾ ಕೊಪ್ಪತಕಜೆ, ಪ್ರಧಾನ ಕಾರ್ಯದರ್ಶಿ ಪಿ ಎ ಉಮ್ಮರ್, ಕೋಶಾಧಿಕಾರಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಮಾಜಿ ಅಧ್ಯಕ್ಷ ಹಾಜಿ ಪಿ ಎ ಉಮ್ಮರ್, ಗ್ರಾ.ಪಂ.ಸದಸ್ಯ ಪಿಕೆ ಅಬೂಸಾಲಿ ತಿಳಿಸಿದರು.