ರೋಪ್‌ವೇ ಕಾರ್ಯಾಚರಣೆಗೆ ಎಸ್‌ಒಪಿ ಸಿದ್ದಪಡಿಸಿ ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ
ಹೊಸದಿಲ್ಲಿ, ಎ. 14: ರೋಪ್‌ವೇಯ ಕಾರ್ಯಾಚರಣೆಗೆ ಪ್ರಮಾಣಿತ ಕಾರ್ಯಾ ವಿಧಾನ (ಎಸ್‌ಒಪಿ) ಹಾಗೂ ತುರ್ತು ಯೋಜನೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸಲಹೆ ರವಾನಿಸಿದೆ.
ಜಾರ್ಖಂಡ್‌ನ ದಿಯೋಗಢದಲ್ಲಿ ಸಂಭವಿಸಿದ ರೋಪ್‌ವೇ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ ದಿನಗಳ ಬಳಿಕ ಕೇಂದ್ರ ಗೃಹ ಸಚಿವಾಲಯ ಈ ಸಲಹೆ ನೀಡಿದೆ. ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಮಂಗಳವಾರ ರವಾನಿಸಲಾದ ಪತ್ರದಲ್ಲಿ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ‘‘ಈ (ಜಾರ್ಖಂಡ್) ಘಟನೆ ರೋಪ್‌ವೇ ಕಾರ್ಯಾಚರಣೆಯಲ್ಲಿ ಪ್ರಮಾಣಿತ ಕಾರ್ಯ ವಿಧಾನ (ಎಸ್‌ಒಪಿ) ಹಾಗೂ ತುರ್ತು ಯೋಜನೆಯ ಅಗತ್ಯತೆ ಬಗ್ಗೆ ಬೆಳಕು ಚೆಲ್ಲಿದೆ. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಸಂಭವಿಸದಿರಲು ಇದು ನೆರವಾಗಲಿದೆ’’ ಎಂದಿದ್ದಾರೆ. ಆದುದರಿಂದ ನಿಮ್ಮ ರಾಜ್ಯದಲ್ಲಿರುವ ಎಲ್ಲ ರೋಪ್‌ವೇ ಯೋಜನೆಗಳ ಸ್ಥಿತಿಗತಿ ಮರು ಪರಿಶೀಲಿಸುವಂತೆ ಹಾಗೂ ರೋಪ್‌ವೇಯ ನಿರ್ವಹಣೆ, ಕಾರ್ಯಾಚರಣೆಗೆ ಎಸ್‌ಒಪಿ, ತುರ್ತು ಯೋಜನೆಗಳ ಖಾತರಿ ನೀಡುವಂತೆ ನಾನು ನಿಮ್ಮಲ್ಲಿ ಆಗ್ರಹಿಸುತ್ತೇನೆ ಎಂದು ಅವರು ಹೇಳಿದ್ದಾರೆ.





