ಅಗತ್ಯವಿದ್ದರೆ ಅಧಿಕಾರಿಗಳನ್ನು ಇಸ್ರೇಲ್‌ಗೂ ಕಳುಹಿಸಲಾಗುವುದು ಎಂದ ಪಂಜಾಬ್ ಸಿಎಂ ಭಗವಂತ್ ಮಾನ್

ಚಂಡಿಗಢ, ಎ. 14: ಆಮ್ ಆದ್ಮಿ ಪಕ್ಷ (ಆಪ್)ದ ವರಿಷ್ಠ ಅರವಿಂದ ಕೇಜ್ರಿವಾಲ್ ದಿಲ್ಲಿಯಲ್ಲಿ ಪಂಜಾಬ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪ್ರತಿಪಕ್ಷಗಳು ‘ರಿಮೋಟ್ ಕಂಟ್ರೋಲ್’ ಎಂದು ವ್ಯಂಗ್ಯವಾಡಿರುವುದಕ್ಕೆ ಪ್ರತಿಕ್ರಿಯಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಅಧಿಕಾರಿಗಳನ್ನು ತರಬೇತಿ ಉದ್ದೇಶಕ್ಕಾಗಿ ಕಳುಹಿಸುವುದು ತನ್ನ ನಿರ್ಧಾರ ಎಂದು ಘೋಷಿಸಿದರು. ‘‘ಅಗತ್ಯವಿದ್ದರೆ, ತರಬೇತಿ ಉದ್ದೇಶಕ್ಕಾಗಿ ನನ್ನ ಅಧಿಕಾರಿಗಳನ್ನು ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಇಸ್ರೇಲ್‌ಗೂ ಕಳುಹಿಸಲಿದ್ದೇನೆ. ಇದಕ್ಕೆ ಯಾರಾದರೂ ಏಕೆ ಆಕ್ಷೇಪಿಸಬೇಕು’’ ಎಂದು ಭಗವಂತ ಮಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘‘ಅದಕ್ಕೆ (ದಿಲ್ಲಿ ಸರಕಾರ) ಶಿಕ್ಷಣ, ವಿದ್ಯುತ್, ಆರೋಗ್ಯ ಕ್ಷೇತ್ರದಲ್ಲಿ ತಜ್ಞತೆ ಇದೆ. ನಾನು ಯಾಕೆ ಅಲ್ಲಿಗೆ ಅಧಿಕಾರಿಗಳನ್ನು ಕಳುಹಿಸಬಾರದು ?’’ ಎಂದು ಅವರು ಪ್ರಶ್ನಿಸಿದರು. ಈ ವಾರದ ಆರಂಭದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಂಜಾಬ್‌ನ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಮಾನ್ ಅವರು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾನ್ ಅವರ ರಿಮೋಟ್ ಕಂಟ್ರೋಲ್ ಅರವಿಂದ್ ಕೇಜ್ರಿವಾಲ್ ಅವರ ಕೈಯಲ್ಲಿದೆ ಎಂಬಂರ್ಥದಲ್ಲಿ ವ್ಯಂಗ್ಯವಾಡಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.







