ಐಪಿಎಲ್: ರಾಜಸ್ಥಾನಕ್ಕೆ ಸೋಲುಣಿಸಿದ ಗುಜರಾತ್ ಟೈಟಾನ್ಸ್
ಹಾರ್ದಿಕ್ ಪಾಂಡ್ಯ ಅರ್ಧಶತಕ, ಫರ್ಗ್ಯುಸನ್,ದಯಾಳ್‌ಗೆ ತಲಾ 3 ವಿಕೆಟ್

ನವಿಮುಂಬೈ, ಎ.14: ನಾಯಕ ಹಾರ್ದಿಕ್ ಪಾಂಡ್ಯ ಅರ್ಧಶತಕ ಹಾಗೂ ಬೌಲರ್‌ಗಳ ಸಾಂಘಿಕ ಪ್ರಯತ್ನದ ಫಲವಾಗಿ ಐಪಿಎಲ್‌ನ 24ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು 37 ರನ್‌ಗಳ ಅಂತರದಿಂದ ಮಣಿಸಿತು.
ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲಲು 193 ರನ್ ಗುರಿ ಪಡೆದ ರಾಜಸ್ಥಾನ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು.
ರಾಜಸ್ಥಾನ ಆರಂಭಿಕ ಬ್ಯಾಟರ್ ದೇವದತ್ತ ಪಡಿಕ್ಕಲ್ ಶೂನ್ಯಕ್ಕೆ ಔಟಾದರು. 3ನೇ ಕ್ರಮಾಂಕದಲ್ಲಿ ಆಡಿದ ಆರ್.ಅಶ್ವಿನ್ 8 ರನ್, ರಾಸ್ಸಿ ವಾಂಡರ್ ಡುಸ್ಸೆನ್ 6 ಹಾಗೂ ನಾಯಕ ಸಂಜು ಸ್ಯಾಮ್ಸನ್ 11 ರನ್ ಗಳಿಸಿದರು. ಇನ್ನೋರ್ವ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್(54 ರನ್, 24 ಎಸೆತ, 8 ಬೌಂಡರಿ, 3 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಶಿಮ್ರೋನ್ ಹೆಟ್ಮೆಯರ್ (29 ರನ್), ರಿಯಾನ್ ಪರಾಗ್(18)ಎರಡಂಕೆಯ ಸ್ಕೋರ್ ಗಳಿಸಿದರು. ಗುಜರಾತ್‌ನ ಪರ ಲಾಕಿ ಫರ್ಗ್ಯುಸನ್(3-23) ಹಾಗೂ ಯಶ್ ದಯಾಳ್(3-40) ತಲಾ 3 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದಿದ್ದ ಗುಜರಾತ್ ತಂಡ ನಾಯಕ ಹಾರ್ದಿಕ್ ಪಾಂಡ್ಯ(ಔಟಾಗದೆ 87, 52 ಎಸೆತ, 8 ಬೌಂಡರಿ, 4 ಸಿಕ್ಸರ್) ಅವರು ಸಿಡಿಸಿದ ಬಿರುಸಿನ ಅರ್ಧಶತಕದ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಕಲೆ ಹಾಕಿತು.
ಗುಜರಾತ್ 6.4ನೇ ಓವರ್‌ನಲ್ಲಿ 53 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಹಾರ್ದಿಕ್ ಪಾಂಡ್ಯ ಹಾಗೂ ಅಭಿನವ್ ಮನೋಹರ್(43 ರನ್, 28 ಎಸೆತ, 4 ಬೌಂಡರಿ, 2 ಸಿಕ್ಸರ್) 4ನೇ ವಿಕೆಟ್‌ಗೆ 86 ರನ್ ಜೊತೆಯಾಟ ನಡೆಸಿ ಗುಜರಾತ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಡೇವಿಡ್ ಮಿಲ್ಲರ್ (ಔಟಾಗದೆ 31, 14 ಎಸೆತ, 5 ಬೌಂಡರಿ, 1 ಸಿಕ್ಸರ್)ಜೊತೆಗೆ 5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 53 ರನ್ ಸೇರಿಸಿದ ಪಾಂಡ್ಯ ತಂಡದ ಮೊತ್ತವನ್ನು 192ಕ್ಕೆ ತಲುಪಿಸಿದರು.
ಇನಿಂಗ್ಸ್ ಆರಂಭಿಸಿದ ಮ್ಯಾಥ್ಯೂ ವೇಡ್(12 ರನ್)ಹಾಗೂ ಶುಭಮನ್ ಗಿಲ್(13) ಉತ್ತಮ ಆರಂಭ ಒದಗಿಸಲು ವಿಫಲರಾದರು. ವೇಡ್ ಹಾಗೂ ವಿಜಯ ಶಂಕರ್(2)ಬೆನ್ನುಬೆನ್ನಿಗೆ ವಿಕೆಟ್ ಒಪ್ಪಿಸಿದರು. ಆಗ ಗಿಲ್ ಜೊತೆಗೆ ಕೈಜೋಡಿಸಿದ ಹಾರ್ದಿಕ್ ಪಾಂಡ್ಯ ಮೂರನೇ ವಿಕೆಟ್‌ಗೆ 38 ರನ್ ಜೊತೆಯಾಟ ನಡೆಸಿ ಇನಿಂಗ್ಸ್ ರಿಪೇರಿ ಮಾಡಿದರು. ರಾಜಸ್ಥಾನದ ಪರ ರಿಯಾನ್ ಪರಾಗ್(1-12), ಯಜುವೇಂದ್ರ ಚಹಾಲ್ (1-32) ಹಾಗೂ ಕುಲದೀಪ್ ಸೇನ್(1-51) ತಲಾ ಒಂದು ವಿಕೆಟ್ ಪಡೆದರು.







