ಇಸ್ರೇಲ್-ಫೆಲೆಸ್ತೀನ್ ಮಧ್ಯೆ ಮತ್ತೊಂದು ಸಂಷರ್ಘ ಸ್ಫೋಟದ ಸಾಧ್ಯತೆ: ವರದಿ

ಜೆರುಸಲೇಂ, ಎ.14: ಇಸ್ರೇಲ್ ಆಕ್ರಮಿತ ಫೆಲೆಸ್ತೀನ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿ ಈ ರಮಝಾನ್ ಸಂದರ್ಭದಲ್ಲಿ ಭಾರೀ ಸಂಘರ್ಷವಾಗಿ ಸ್ಫೋಟಗೊಳ್ಳುವ ಸಾಧ್ಯತೆಯಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ಈ ಮಧ್ಯೆ, ಗಾಝಾ ಪಟ್ಟಿಯ ನಿವಾಸಿಗಳು ಮತ್ತೊಂದು ಯುದ್ಧದ ಭೀತಿಯಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪರಿಸ್ಥಿತಿ ಕ್ರಮೇಣ ಉಲ್ಬಣಗೊಳ್ಳುವತ್ತ ಸಾಗುತ್ತಿದೆ, ಸ್ಫೋಟಕ್ಕೆ ಪರಿಸ್ಥಿತಿಗಳು ಪಕ್ವವಾಗಿವೆ ಎಂದು ಜೆರುಸಲೇಂ ಮೂಲದ ರಾಜಕೀಯ ವಿಶ್ಲೇಷಕ ಮಝೆನ್ ಜಾಬರಿ ಅವರನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ. ಕಳೆದ ವರ್ಷ ಜೆರುಸಲೇಂನಲ್ಲಿರುವ ತಮ್ಮ ಮನೆಗಳಿಂದ ಪೆಲೆಸ್ತೀನ್ ಕುಟುಂಬಗಳನ್ನು ಹೊರಹಾಕಿರುವುದು ಇಸ್ರೇಲ್ ನಾದ್ಯಂತ ಮತ್ತು ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಅಲ್ಲದೆ ಪವಿತ್ರ ರಮಝಾನ್ ತಿಂಗಳಿನ ಸಂದರ್ಭ ಅಲ್ ಅಖ್ಸಾ ಮಸೀದಿಯ ಮೇಲೆ ಇಸ್ರೇಲ್ನ ಭದ್ರತಾ ಪಡೆ ದಾಳಿ ನಡೆಸಿದ್ದು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತ್ತು . ಇದಾದ 4 ದಿನದ ಬಳಿಕ ಹಮಾಸ್ ಪಡೆ ಇಸ್ರೇಲ್ನತ್ತ ಕ್ಷಿಪಣಿ ಪ್ರಯೋಗಿಸಿದ್ದಕ್ಕೆ ಪ್ರತಿಯಾಗಿ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ 11 ದಿನ ದಾಳಿ ನಡೆಸಿತ್ತು.
ಅಂದಿನಿಂದ , ಇಸ್ರೇಲ್-ಫೆಲೆಸ್ತೀನ್ ನಡುವೆ ಮತ್ತೊಂದು ಸಂಘರ್ಷ ಸ್ಫೋಟಗೊಳ್ಳುವುದಕ್ಕೆ ಪೂರಕವಾದ ಹಲವು ಬೆಳವಣಿಗೆಗಳು ನಡೆದಿವೆ. ಜೆರುಸಲೇಂ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಷರ್ಘ ಉಲ್ಬಣಿಸಬಹುದು. ಪಶ್ಚಿಮ ದಂಡೆಯಲ್ಲಿನ ಜೆನಿನ್ ನಗರದಲ್ಲಿ ಸಂಘರ್ಷ ವ್ಯಾಪಕವಾಗಿರಬಹುದು, ಯಾಕೆಂದರೆ ಇಸ್ರೇಲ್ ಸೇನೆ ಈ ನಗರದ ವಿರುದ್ಧ ಸೇಡು ತೀರಿಸಲು ಯೋಜನೆ ಹಾಕಿಕೊಂಡಿದೆ ಎಂದು ಮಝೆನ್ ಜಾಬರಿ ಹೇಳಿದ್ದಾರೆ.





