ಕ್ಷಿಪಣಿ ದಾಳಿಯಿಂದ ಮುಳುಗಿದ ರಷ್ಯಾ ಯುದ್ಧನೌಕೆ ; ಉಕ್ರೇನ್ ಪ್ರತಿಪಾದನೆ

ಕೀವ್ : ಏಳು ವಾರಗಳಿಂದ ಮುಂದುವರಿದಿರುವ ನೆರೆರಾಷ್ಟ್ರದ ಮೇಲಿನ ದಾಳಿಯಲ್ಲಿ ಮುಂಚೂಣಿಯಲ್ಲಿದ್ದ ರಷ್ಯಾದ ಬ್ಲ್ಯಾಕ್ ಸೀ ಫ್ಯಾಗ್‍ಶಿಪ್ ಗುರುವಾರ ಸ್ಫೋಟ ಮತ್ತು ಬೆಂಕಿಯ ಕಾರಣದಿಂದ ಮುಳುಗಿದೆ.
ಆದರೆ ಯುದ್ಧನೌಕೆ ಮುಳುಗಲು ಕ್ಷಿಪಣಿ ದಾಳಿ ಕಾರಣ ಎಂದು ಉಕ್ರೇನ್ ಪ್ರತಿಪಾದಿಸಿದೆ. ಗಡಿಭಾಗದ ನಾಗರಿಕರನ್ನು ಗುರಿ ಮಾಡಿ ಉಕ್ರೇನ್ ದಾಳಿ ನಡೆಸುತ್ತಿದೆ ಎಂದು ರಷ್ಯಾ ಆಪಾದಿಸಿದೆ.
ಉಕ್ರೇನ್ ವಿರುದ್ಧದ ದಾಳಿಯಲ್ಲಿ ಗೈಡೆಡ್ ಮಿಸೈಸ್ ಕ್ರೂಸರ್ ಮೊಸ್ಕ್ ವಾ ಮುಂಚೂಣಿಯಲ್ಲಿತ್ತು. ಈ ಯುದ್ಧ ನೌಕೆಯಲ್ಲಿ ಶಸ್ತ್ರಾಸ್ತ್ರಗಳು ಸಿಡಿದು ಸ್ಫೋಟ ಸಂಭವಿಸಿದೆ. ಈ ಹಾನಿಯಿಂದಾಗಿ ಬಂದರಿನತ್ತ ಚಲಿಸುವ ವೇಳೆ ನೌಕೆ ನಿಯಂತ್ರಣ ಕಳೆದುಕೊಂಡಿತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದೆ.
ಸಮುದ್ರದ ಪ್ರಕ್ಷುಬ್ಧ ಸ್ಥಿತಿಯಿಂದಾಗಿ ನೌಕೆ ಮುಳುಗಿದೆ ಎಂದು ರಷ್ಯಾದ ಸರ್ಕಾರಿ ಸುದ್ದಿಸಂಸ್ಥೆ ಟಾಸ್ ವರದಿ ಮಾಡಿದೆ. ಆದರೆ ಉಕ್ರೇನ್ ಇದಕ್ಕೆ ಭಿನ್ನ ಕಾರಣ ನೀಡಿದ್ದು, ಉಕ್ರೇನ್‍ನ ದೇಶೀಯ ನೆಪ್ಚೂನ್ ಕ್ರೂಸ್ ಕ್ಷಿಪಣಿ ಬಡಿದು ನೌಕೆ ಮುಳುಗಿದೆ ಎಂದು ಒಡೆಸ್ಸಾ ಸೇನಾ ವಕ್ತಾರ ಸೆರ್ಗಿ ಬ್ರುಚುಕ್ ಹೇಳಿದ್ದಾರೆ.
ಈ ಎರಡೂ ಪ್ರತಿಪಾದನೆಗಳನ್ನು ದೃಢಪಡಿಸಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ ಎಂದು ವಾಷಿಂಗ್ಟನ್‍ನಲ್ಲಿ ಪೆಂಟಗಾನ್ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. ಆದರೆ ಮೊಸ್ಕ್ ವಾ ಮುಳುಗಿರುವುದು ರಷ್ಯಾದ ಸೇನೆಗೆ ದೊಡ್ಡ ಹೊಡೆತ ಎಂದು ಪ್ರತಿಕ್ರಿಯಿಸಿದ್ದಾರೆ.
ಉಕ್ರೇನ್‍ನ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯ ಪುನರಾರಂಭವಾಗಿದೆ. ರಷ್ಯಾ ದಾಳಿಯ ಹಿನ್ನೆಲೆಯಲ್ಲಿ ಕಳೆದ 50 ದಿನಗಳಲ್ಲಿ 47 ಲಕ್ಷ ಮಂದಿ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಉಕ್ರೇನ್‍ನ ರಾಜಧಾನಿಯನ್ನು ವಶಕ್ಕೆ ಪಡೆಯಲು ನಡೆಸಿದ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಉತ್ತರ ಉಕ್ರೇನ್‍ನಿಂದ ಸೇನೆ ವಾಪಾಸು ಪಡೆದಿರುವ ರಷ್ಯಾ, ಇದೀಗ ಪೂರ್ವದತ್ತ ಗಮನ ಹರಿಸಿದೆ. ಈ ಹಿನ್ನೆಲೆಯಲ್ಲಿ ಡೊನ್‍ಬಾಸ್ ಪ್ರದೇಶದಲ್ಲಿ ಭೀಕರ ರಕ್ತಸಿಕ್ತ ಕಾಳಗ ನಡೆಯುವ ಸಾಧ್ಯತೆ ಇದೆ ಎಂದು ಉಕ್ರೇನ್ ಎಚ್ಚರಿಸಿದೆ.







