ರಾಜ್ಯದಲ್ಲಿ ಹಲಾಲ್ ವಿವಾದದಿಂದ ಕುರಿ ಮಾರಾಟಕ್ಕೆ ಧಕ್ಕೆ

ಫೈಲ್ ಫೋಟೊ
ಬೆಂಗಳೂರು: ರಾಜ್ಯದಲ್ಲಿ ಎದ್ದಿರುವ ಹಲಾಲ್ ವಿವಾದವು ರಾಜ್ಯದ ಅತಿದೊಡ್ಡ ಕುರಿ ಮಾರುಕಟ್ಟೆ ಎನಿಸಿದ ಚಿತ್ರದುರ್ಗದಲ್ಲಿ ಕುರಿಗಳ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಪ್ರತಿ ಗುರುವಾರ 6000 ದಿಂದ 8000 ಕುರಿಗಳು ಮಾರಾಟವಾಗುತ್ತಿದ್ದ ಮಾರುಕಟ್ಟೆಯಲ್ಲಿ ಈ ಬಾರಿ ಕೇವಲ 2000 ದಿಂದ 3000 ಕುರಿಗಳಷ್ಟೇ ಮಾರಾಟವಾಗಿವೆ ಎಂದು deccanherald.com ವರದಿ ಮಾಡಿದೆ.
ಹಲವು ದಶಕಗಳಿಂದ ಕುರಿ ಸಾಕಾಣಿಕೆದಾರರು ಮತ್ತು ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದು, ಕಳೆದ ಎರಡು ಮೂರು ತಿಂಗಳಿನಿಂದ ಮುಸ್ಲಿಂ ವ್ಯಾಪಾರಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಕೆಲ ಸಂಘಟನೆಗಳು ಹಲಾಲ್ ಮಾಂಸ ನಿಷೇಧ ಅಭಿಯಾನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಮಾರುಕಟ್ಟೆಗೆ ಬರುವ ಬದಲು ಸ್ಥಳೀಯವಾಗಿಯೇ ಲಭ್ಯವಿರುವ ಕುರಿಗಳನ್ನು ಖರೀದಿಸುತ್ತಿರುವುದಾಗಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಕುರಿ ವ್ಯಾಪಾರಿ ಝಫ್ರುಲ್ಲಾ ಹೇಳಿದರು.
"ಹಲಾಲ್ ನಮ್ಮ ಸಂಸ್ಕೃತಿ ಮತ್ತು ಹಲಾಲ್ ನಿಷೇಧಕ್ಕೆ ಬಹಿರಂಗ ಕರೆ ನೀಡಿರುವುದು ವ್ಯಾಪಾರಿಗಳು ಇಲ್ಲಿಗೆ ಬರಲು ಹಿಂದೇಟು ಹಾಕಲು ಕಾರಣವಾಗಿದೆ" ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ 18.37 ಲಕ್ಷಕ್ಕೂ ಅಧಿಕ ಕುರಿಗಳು ಇರುವ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲೇ ಅತಿದೊಡ್ಡ ಕುರಿ ಸಾಕಾಣಿಕೆ ಜಿಲ್ಲೆ ಎನಿಸಿಕೊಂಡಿದೆ. ಜಿಲ್ಲೆಯ ಚಳ್ಳಕೆರೆ ಮತ್ತು ಹಿರಿಯೂರು ತಾಲೂಕುಗಳು ಅತಿಹೆಚ್ಚು ಕುರಿ ಸಾಕಾಣಿಕೆದಾರರನ್ನು ಹೊಂದಿವೆ. "ನಾನು ಪ್ರತಿ ವಾರ 25 ಕುರಿಗಳನ್ನು ಮಾರುತ್ತಿದ್ದೆ. ಆದರೆ ಇದೀಗ ಒಳ್ಳೆಯ ಬೆಲೆ ನೀಡುತ್ತಿದ್ದ ಮುಸ್ಲಿಂ ಖರೀದಿದಾರರು ಕಡಿಮೆಯಾಗಿರುವ ಕಾರಣ ಐದು ಕುರಿಗಳನ್ನು ಮಾರಾಟ ಮಾಡುವುದೂ ಕಷ್ಟವಾಗುತ್ತಿದೆ" ಎಂದು ಮಾರಘಟ್ಟ ಗ್ರಾಮದ ರೈತ ಬಸಣ್ಣ ಹೇಳಿದರು.
ಕೇವಲ 3000 ದಿಂದ 4000 ರೂಪಾಯಿಗಳಿಗೆ ಕುರಿ ಮಾರಾಟ ಮಾಡುವ ಮೂಲಕ ದೊಡ್ಡ ನಷ್ಟ ಅನುಭವಿಸುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು. ಆದರೆ ಒಳ್ಳೆಯ ಬೆಲೆಯ ನಿರೀಕ್ಷೆಯಲ್ಲಿ ಮತ್ತೆ ಅವುಗಳನ್ನು ಮನೆಗೆ ಒಯ್ಯುವ ಬದಲು ನಷ್ಟವಾದರೂ ಮಾರಾಟ ಮಾಡುವುದು ಅನಿವಾರ್ಯವಾಗಿದೆ ಎನ್ನುವುದು ಅವರ ವಿಶ್ಲೇಷಣೆ. ಸಾಮಾನ್ಯವಾಗಿ ಕುರಿ ಬೆಲೆ 5000 ರೂಪಾಯಿಗಿಂತ ಕಡಿಮೆ ಇರುವುದಿಲ್ಲ.
"ಲಾರಿಗಳಲ್ಲಿ ಆಗಮಿಸುತ್ತಿದ್ದ ಮುಸ್ಲಿಂ ವ್ಯಾಪಾರಿಗಳು 200ಕ್ಕೂ ಹೆಚ್ಚು ಕುರಿಗಳನ್ನು ವಿಕ್ರಯಿಸುತ್ತಿದ್ದರು. ಆದರೆ ಕಳೆದ ನಾಲ್ಕೈದು ತಿಂಗಳಿಂದ ಈ ಸಂಖ್ಯೆ ಇಳಿದಿದೆ. ಇತ್ತೀಚಿನ ವಿವಾದಗಳು ಇದಕ್ಕೆ ಕಾರಣ ಇರಬಹುದು" ಎಂದು ಮೊಳಕಾಲ್ಮೂರು ತಾಲೂಕು ರಾಮಾಪುರ ಗ್ರಾಮದ ದಲ್ಲಾಳಿ ಇಮಾಮ್ ಸಾಬ್ ಹೇಳುತ್ತಾರೆ.







