ಬಂಟರ ಸಂಘ ಸುರತ್ಕಲ್ ನಲ್ಲಿ "ಯಕ್ಷಸಿರಿ" ಉದ್ಘಾಟನೆ

ಸುರತ್ಕಲ್ : ಯಕ್ಷಗಾನ ಸಾಂಸ್ಕೃತಿ ಕ್ಷೇತ್ರದಲ್ಲಿ ರಾಷ್ಟ್ರ ಲಾಂಛನವಾಗಿ ಬಳಸಬೇಕಾದ ಕಲೆ ಎಂದು ಪಂಚ ಯಕ್ಷಗಾನ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ನುಡಿದರು.
ಬಂಟರ ಸಂಘ ಸುರತ್ಕಲ್ ಇದರ ಸಹಯೋಗದಲ್ಲಿ ಸುರತ್ಕಲ್ ಬಂಟರ ಸಂಘದಲ್ಲಿ ಗುರುವಾರ ಸಂಜೆ ಜರುಗಿದ "ಯಕ್ಷಸಿರಿ" ಯಕ್ಷಗಾನ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯಕ್ಷಗಾನ ದೇವರ ಸೇವೆಯಿದ್ದಂತೆ. ಕಲೆಗೆ ಜಾತಿ ಧರ್ಮಗಳ ಎಲ್ಲೆಗಳಿಲ್ಲ. ಅದರಂತೆಯೇ ಯಕ್ಷಗಾನ ಕಲೆಯಲ್ಲೂ ಯಾವುದೇ ಜಾತಿ- ಧರ್ಮಗಳ ಪರಿಧಿಗಳಿಲ್ಲ ಎಂಬುದನ್ನು ನಮ್ಮ ಹಿರಿಯರು ತೋರಿಸಿಕೊಟ್ಟಿದ್ದಾರೆ ಎಂದರು.
ಸುರತ್ಕಲ್ ಬಂಟರ ಸಂಘ ಸರ್ವ ಧರ್ಮೀಯರನ್ನು ಒಗ್ಗೂಡಿಸಿಕೊಂಡು ಯಕ್ಷಗಾನ ತರಬೇತಿ ನೀಡಲು ಮುಂದಾಗಿರುವುದು ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಶ್ಲಾಘಿಸಿದರು.
ಹಿಂದೆ ಯಕ್ಷಗಾನ ಕಲಾವಿದರ ಬಗ್ಗೆ ತಾತ್ಸಾರವಿತ್ತು. ಆದರೆ, ಈಗ ವಿದ್ಯಾವಂತ ಯುವಜನತೆ ಯಕ್ಷಗಾನ ಕಲೆಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತಾಡಿದ ಕರ್ನಾಟಕ ಯಕ್ಷಗಾನ ಅಕಾಡಮಿ ಬೆಂಗಳೂರು ಇದರ ಸದಸ್ಯ ನವನೀತ್ ಶೆಟ್ಟಿ ಕದ್ರಿ, "ಸುರತ್ಕಲ್ ಗೂ ಯಕ್ಷಗಾನಕ್ಕೂ ತಲೆ ತಲಾಂತರಗಳ ಇತಿಹಾಸವಿದೆ. ಹಿಂದೆ ಇದೇ ಕ್ಷೇತ್ರದಲ್ಲಿ ಕುಂಬ್ಳೆ ಸುಂದರ ರಾವ್ ಅವರಂತಹ ಯಕ್ಷಗಾನ ಕಲಾವಿದರು ಚುನಾವಣೆಗೆ ನಿಂತು ಗೆದ್ದಿದ್ದರು. ಅವರ ಗೆಲುವಿಗೆ ಪಕ್ಷಕ್ಕಿಂತ ಅವರು ಯಕ್ಷಗಾನ ಕಲಾವಿದರಾಗಿದ್ದರಿಂದ ಸಾಧ್ಯವಾಗಿದೆ ಎಂದರು.
ಇತ್ತೀಚಿಗೆ ನಿಧನರಾದ ಕಟೀಲು ಮೇಳದ ಪ್ರಧಾನ ಭಾಗವತರಾದ ಪ್ರಸಾದ ಬಲಿಪರನ್ನು ಇದೇ ಸಂದರ್ಭದಲ್ಲಿ ಸ್ಮರಿಸಲಾಯಿತು.
ಬಂಟರ ಸಂಘ ಸುರತ್ಕಲ್ ಇದರ ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತಾನ್ನಾಡಿದರು.
ಅಗರಿ ರಾಘವೇಂದ್ರ ರಾವ್, ಯಕ್ಷಗಾನ ಅಕಾಡೆಮಿ ಸದಸ್ಯ ಮಾಧವ ಭಂಡಾರಿ ಕುಳಾಯಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಿ.ಇ., ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕೇಂದ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಎಸ್. ಪೂಂಜಾ, ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಯಕ್ಷಗುರು ರಾಕೇಶ್ ರೈ ಅಡ್ಕ, ಲೀಲಾಧರ್ ಶೆಟ್ಟಿ ಕಟ್ಲ, ದೇವಾನಂದ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಚಿತ್ರಾ ಜೆ. ಶೆಟ್ಟಿ, ಯಕ್ಷ ಸಿರಿ ಸಹಸಂಚಾಲಕಿ ಕೇಸರಿ ಎಸ್. ಪೂಂಜಾ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ ಅವರನ್ನು ವೇದಿಕೆಯಲ್ಲಿದ್ದ ಅತಿಥಿಗಳು ಗೌರವಿಸಿದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ ಅತಿಥಿಗಳನ್ನು ಸ್ವಾಗತಿಸಿದರು. ಖ್ಯಾತ ಭಾಗವತ ಕೇಶವ ಶೆಟ್ಟಿ ಪಡ್ರೆ ಮತ್ತು ತಂಡದವರು ಪ್ರಾರ್ಥಿಸಿದರು. ಲೋಕಯ್ಯ ಶೆಟ್ಟಿ ಮುಂಚೂರು ವಂದನಾರ್ಪಣೆಗೈದರು. ರಾಜೇಶ್ವರಿ ಡಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







