ಭಗತ್ ಸಿಂಗ್ ನಮಗೆ ದಾರಿದೀಪವಾದಾರು

ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರೆಂದು ಮನ್ನಣೆ ನೀಡುತ್ತಲೇ ಅವರನ್ನು ಭಯೋತ್ಪಾದಕರೆಂದು ಕರೆಯುವ ರೂಢಿಯೊಂದಿದೆ. ಬ್ರಿಟಿಷರೇ ಆ ಅಂಕಿತ ನೀಡಿದ್ದವರು. ಯುವಕರಿಗೆ ನೀಡಿದ ಸಂದೇಶದಲ್ಲಿ ಅದರ ಕುರಿತು ವಿವರಣೆಯನ್ನು ನೀಡಿರುವ ಭಗತ್ ತಾನೆಂದೂ ಭಯೋತ್ಪಾದಕನಲ್ಲವೆಂದು ಸಮಜಾಯಿಷಿ ನೀಡಿದ್ದಾರೆ. ಇಂದಿನ ನಮ್ಮ ಸಂದರ್ಭ ಹೇಗಿದೆಯೆಂದರೆ ಕೇಂದ್ರ ಸರಕಾರದ ಆರ್ಥಿಕ ನೀತಿಯನ್ನು ವಿರೋಧಿಸಿದರೂ ರಾಷ್ಟ್ರದ್ರೋಹದ ಆಪಾದನೆ ಹೊರಿಸಿಬಿಡುತ್ತಾರೆ. ಸುಳ್ಳುಸುಳ್ಳೇ ಪಾಕಿಸ್ತಾನದ ಪರ ಘೋಷಣೆ ಕೂಗಿದರೆಂದು ಕೆಲವರ ಮೇಲೆ ಆಪಾದನೆ ಮಾಡಲಾಗುತ್ತಿದೆ; ಅಂತಹ ಹುರುಳಿಲ್ಲದ ಆಪಾದನೆ ಮಾಡುವವರ ಸಾಂಸ್ಕೃತಿಕ ಸೈನ್ಯದ ಕಟ್ಟಾಳುಗಳು ಮೆರವಣಿಗೆಗಳಲ್ಲಿ ಬೆರೆತು ಅಂತಹ ಘೋಷಣೆ ಕೂಗಿ ಇತರರನ್ನು ಬಂಧನಕ್ಕೆ ಸಿಲುಕಿಸಿರುವುದೂ ಉಂಟು. ಅಂತಹ ಸಂದರ್ಭಗಳಲ್ಲಿ ಭಗತ್ ಸಿಂಗ್ ನಮಗೆ ಸಾಂತ್ವನ ನೀಡಬಲ್ಲ.
ತನ್ನ ಯುಗವನ್ನು ಭಗತ್ ಸಿಂಗ್ ವಿಮೋಚನೆಯ ಯುಗವೆಂದು ಹೆಸರಿಸಿದ್ದಾರೆ. ಇಂದಿನ ಯುಗವನ್ನು ಹಾಗೆ ಕರೆಯಲು ಅಳುಕಿದೆ. ‘‘ಭಾರತ ಸರಕಾರದ ಮುಖ್ಯಸ್ಥ ಲಾರ್ಡ್ ರೆಡಿಂಗ್ ಆದರೇನು, ಸರ್ ಪುರುಷೋತ್ತಮ ದಾಸ್ ಠಾಕೂರ್ ದಾಸ್ ಆದರೇನು, ರೈತ-ಕಾರ್ಮಿಕರಿಗೆ ಅದು ಹೇಗೆ ಭಿನ್ನವಾಗಿ ತೋರಬಲ್ಲದು?’’ ಎಂಬ ಪ್ರಶ್ನೆಯನ್ನು ಭಗತ್ ಸಿಂಗ್ ಗಂಭೀರವಾಗಿ ಎತ್ತಿದ್ದಾರೆ. ಹೆಜ್ಜೆಹೆಜ್ಜೆಗೂ ನಾವಿದನ್ನು ಮನನ ಮಾಡಿಕೊಳ್ಳುತ್ತಾ ಬದಲಾವಣೆಯ ಹರಿಕಾರರಾಗುವ ಅಗತ್ಯವಿದೆ. ಗಾಂಧೀಜಿ ಒಮ್ಮೆ ಹೇಳಿದ್ದರು. ‘‘ದಿಮ್ಮಿ ದೊರೆಯನ್ನು ಓಡಿಸಿ ಹದ್ದು ದೊರೆಯನ್ನು ಆಯ್ಕೆ ಮಾಡಿಕೊಳ್ಳಲು ನಾನು ತಯಾರಿಲ್ಲ.’’ ಎಂದು. ಪ್ರಸ್ತುತ ಸಂದರ್ಭದಲ್ಲಿ ಭಗತ್ ಸಿಂಗ್‌ನ ಸಂದೇಶ ಅದರಲ್ಲಡಗಿದೆ.
ಒಂದೆಡೆ ಅವರು ಹೇಳುತ್ತಾರೆ: ‘‘ವಿಮರ್ಶೆ ಮಾಡುವ ಪ್ರವೃತ್ತಿ ಮತ್ತು ಸ್ವತಂತ್ರ ಆಲೋಚನೆ ಇವೆರಡೂ ಯಾವುದೇ ಕ್ರಾಂತಿಕಾರಿಗೆ ಇರಬೇಕಾದ ಅತ್ಯವಶ್ಯ ಗುಣಲಕ್ಷಣಗಳು. ಮಹಾತ್ಮಾಜಿ ಶ್ರೇಷ್ಠ ವ್ಯಕ್ತಿ ಎಂದ ಮಾತ್ರಕ್ಕೆ ಯಾರೂ ಅವರನ್ನು ಟೀಕಿಸುವಂತಿಲ್ಲವೇ? ಅವರು ಎತ್ತರಕ್ಕೆ ಏರಿರುವ ಕಾರಣದಿಂದ ರಾಜಕೀಯ ಕ್ಷೇತ್ರದಲ್ಲೇ ಇರಲಿ, ಮತಧರ್ಮದಲ್ಲಿರಲಿ, ಅರ್ಥಶಾಸ್ತ್ರ ಅಥವಾ ನೈತಿಕತೆಯ ಬಗ್ಗೆಯಾಗಲಿ ಅವರು ಹೇಳುವುದೆಲ್ಲವೂ ಸರಿಯೇ .... ಇಂತಹ ಮನಸ್ಥಿತಿ ನಮ್ಮನ್ನು ಪ್ರಗತಿಯತ್ತ ಕೊಂಡೊಯ್ಯುವುದಿಲ್ಲ. ಇದು ತೀರಾ ಪ್ರತಿಗಾಮಿ ನಡವಳಿಕೆ.’’
ಗಾಂಧೀಜಿಯ ಬಗ್ಗೆ ಇಷ್ಟು ಮುಕ್ತವಾಗಿ ಮಾತನಾಡಿದ ಭಗತ್ ಗಾಂಧೀಜಿಯದೇ ರಾಜ್ಯದ ಇಂದಿನ ಮುತ್ಸದ್ದಿಗಳ ಬಗ್ಗೆ ಏನು ಹೇಳಬಹುದಲ್ಲವೆ? ವಿಮರ್ಶೆ ಮತ್ತು ಸ್ವತಂತ್ರ ಆಲೋಚನೆ ರಾಷ್ಟ್ರದೋಹ ಎಂಬ ಹಣೆಪಟ್ಟಿ ಪಡೆಯುವ ದುರಂತದ ಹಂತದಲ್ಲಿ ನಾವಿರುವಾಗ ಭಗತ್ ಸಿಂಗ್ ನಮಗೆ ದಾರಿದೀಪ ನವಚೇತನ ಮತ್ತು ದಾರ್ಢ್ಯ ತುಂಬುವ ಪ್ರಚಂಡ ಸೆಲೆ. ಅವರ ಆಯ್ದ ಬರಹಗಳನ್ನು ಶ್ರೀಮತಿ ಜ್ಯೋತಿ ಎ. ಸುಂದರವಾಗಿ ಅನುವಾದಿಸಿದ್ದಾರೆ ಮತ್ತು ಸಮಯೋಚಿತವಾಗಿ ನಮ್ಮ ಮುಂದಿರಿಸಿದ್ದಾರೆ.







