ದಿಲ್ಲಿ: ಜೆಎನ್ ಯು ಕ್ಯಾಂಪಸ್ ಬಳಿ ಹಾಕಲಾಗಿದ್ದ ಕೇಸರಿ ಧ್ವಜ, ಬ್ಯಾನರ್ ಗಳನ್ನು ತೆಗೆದುಹಾಕಿದ ಪೊಲೀಸರು

Photo courtesy: Delhi Police
ಹೊಸದಿಲ್ಲಿ: ರಾಮ ನವಮಿಯಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ನಡೆದ ಹಿಂಸಾಚಾರವನ್ನು ವಿರೋಧಿಸಿ ಹಿಂದೂ ಸೇನೆಯ ಸದಸ್ಯರು ವಿಶ್ವವಿದ್ಯಾಲಯದ ಕ್ಯಾಂಪಸ್ ಬಳಿ ಕೇಸರಿ ಧ್ವಜಗಳು ಹಾಗೂ ‘ಭಗವಾ ಜೆಎನ್ಯು (ಕೇಸರಿ ಜೆಎನ್ಯು)’ ಎಂದು ಬರೆದಿದ್ದ ಬ್ಯಾನರ್ಗಳನ್ನು ಹಾಕಿದ್ದರು. ಆದರೆ, ಪೊಲೀಸರು ಧ್ವಜ ಮತ್ತು ಬ್ಯಾನರ್ಗಳನ್ನು ಕಂಡ ತಕ್ಷಣ ಕ್ಷಿಪ್ರ ಕ್ರಮ ಕೈಗೊಂಡು ಶುಕ್ರವಾರ ಬೆಳಿಗ್ಗೆ ಅವುಗಳನ್ನು ತೆಗೆದುಹಾಕಿದ್ದಾರೆ ಎಂದು Indian express ವರದಿ ಮಾಡಿದೆ.
“ಜೆಎನ್ಯು ಕ್ಯಾಂಪಸ್ನಲ್ಲಿ ಕೇಸರಿ ಹಾಗೂ ಹಿಂದುತ್ವವನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ. ಇದು ದುರದೃಷ್ಟಕರ ಹಾಗೂ ತಪ್ಪು. ರಾಮನವಮಿಯಂದು ನಾವು ಇದನ್ನು ನೋಡಿದ್ದೇವೆ. ಈ ಜನರು ಕೇಸರಿ ಬಣ್ಣವನ್ನು ಏಕೆ ದ್ವೇಷಿಸುತ್ತಾರೆ? ಕೇಸರಿ ನಮ್ಮ ಸಂಸ್ಕೃತಿ, ಇದು ಜೆಎನ್ಯು ಮಾತ್ರವಲ್ಲದೆ ಇಡೀ ದೇಶದಲ್ಲಿ ನಮ್ಮ ಸಂಸ್ಕೃತಿಯ ಸಂಕೇತವಾಗಿದೆ ಕೇಸರಿ ಧ್ವಜದಿಂದ ತೊಂದರೆಗೊಳಗಾದವರು ದೇಶ ವಿರೋಧಿಗಳು. ಭಾರತದ ಸಂಸ್ಕೃತಿಯಲ್ಲಿ ಯಾರಿಗಾದರೂ ಸಮಸ್ಯೆಯಿದ್ದರೆ, ಅವರು ದೇಶವನ್ನು ತೊರೆಯಬಹುದು’’ ಎಂದು ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಹೇಳಿದ್ದಾರೆ.
ಪೊಲೀಸರ ಕ್ರಮಕ್ಕೆ ಪ್ರತಿಕ್ರಿಯಿಸಿದ ಗುಪ್ತಾ, "ಧ್ವಜಗಳನ್ನು ತೆಗೆದುಹಾಕುವ ಮೂಲಕ ಪೊಲೀಸರು ಸಂವಿಧಾನವನ್ನು ಅಗೌರವಿಸಿದ್ದಾರೆ'' ಎಂದು ಹೇಳಿದರು.







