ಇಂಗ್ಲೆಂಡ್ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ರೂಟ್

Photo: twitter
ಲಂಡನ್: ಇಂಗ್ಲೆಂಡ್ನ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಜೋ ರೂಟ್ ಶುಕ್ರವಾರ ಪ್ರಕಟಿಸಿದ್ದಾರೆ.
ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ತಂಡವು ಟೆಸ್ಟ್ ಸರಣಿ ಸೋತ ನಂತರ ರೂಟ್ ಈ ನಿರ್ಧಾರ ಕೈಗೊಂಡಿದ್ದಾರೆ. ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ 0-4 ಅಂತರದಿಂದ ಸೋಲು ಎದುರಿಸಿತು. ಆ ನಂತರ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 0-1 ರಿಂದ ಕಳೆದುಕೊಂಡಿತ್ತು.
27 ಟೆಸ್ಟ್ ಪಂದ್ಯಗಳನ್ನು ಗೆದ್ದ ನಂತರ ರೂಟ್ ಇಂಗ್ಲೆಂಡ್ ನ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿದ್ದಾರೆ. ರೂಟ್ ಅವರು ಮೈಕೆಲ್ ವಾನ್, ಸರ್ ಅಲೆಸ್ಟೈರ್ ಕುಕ್ ಹಾಗೂ ಸರ್ ಆಂಡ್ರ್ಯೂ ಸ್ಟ್ರಾಸ್ ಸಾಧನೆಯನ್ನು ಮೀರಿ ನಿಂತಿದ್ದರು.
"ಕೆರಿಬಿಯನ್ ಪ್ರವಾಸದಿಂದ ಹಿಂದಿರುಗಿದ ನಂತರ ನಾನು ಇಂಗ್ಲೆಂಡ್ ಪುರುಷರ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಇದು ನನ್ನ ವೃತ್ತಿಜೀವನದ ಅತ್ಯಂತ ಸವಾಲಿನ ನಿರ್ಧಾರವಾಗಿದೆ. ಈ ನಿರ್ಧಾರದ ಕುರಿತು ನನ್ನ ಕುಟುಂಬ ಹಾಗೂ ನನಗೆ ಹತ್ತಿರವಿರುವವರೊಂದಿಗೆ ಚರ್ಚಿಸಿದ್ದೇನೆ. ನಾನು ನಿರ್ಧಾರ ತೆಗೆದುಕೊಂಡ ಸಮಯ ಸರಿಯಾಗಿದೆ ಎಂದು ನನಗೆ ತಿಳಿದಿದೆ. ನನ್ನ ದೇಶಕ್ಕಾಗಿ ನಾಯಕತ್ವ ವಹಿಸಿದ್ದಕ್ಕಾಗಿ ನಾನು ಅಪಾರ ಹೆಮ್ಮೆಪಡುತ್ತೇನೆ ಹಾಗೂ ಅಗಾಧವಾದ ಹೆಮ್ಮೆಯಿಂದ ಕಳೆದ ಐದು ವರ್ಷಗಳನ್ನು ಅವಲೋಕಿಸಲು ಬಯಸುವೆ’’ ಎಂದು ರೂಟ್ ಹೇಳಿದ್ದಾರೆ.
ಸರ್ ಅಲೆಸ್ಟೈರ್ ಕುಕ್ ಬದಲಿಗೆ ರೂಟ್ ಅವರನ್ನು 2017 ರಲ್ಲಿ ಇಂಗ್ಲೆಂಡ್ ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು. ರೂಟ್ 2018 ರಲ್ಲಿ ಭಾರತದ ವಿರುದ್ಧ 4-1 ಸ್ವದೇಶಿ ಸರಣಿ ಗೆಲುವು ಹಾಗೂ 2020 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3-1 ವಿಜಯವನ್ನು ಒಳಗೊಂಡಂತೆ ಕೆಲವು ಪ್ರಮುಖ ಗೆಲುವುಗಳಲ್ಲಿ ಇಂಗ್ಲೆಂಡ್ ತಂಡವನ್ನುನಾಯಕನಾಗಿ ಮುನ್ನಡೆಸಿದ್ದರು.







