ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿಯ ಜನ್ಮದಿನವನ್ನು ಭಾವೈಕ್ಯ ದಿನವಾಗಿ ಆಚರಣೆ: ಸಿಎಂ ಬೊಮ್ಮಾಯಿ ಘೋಷಣೆ

ಗದಗ, ಎ.15: ಜಗದ್ಗುರು ಡಾ: ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿಯ ಜನ್ಮದಿನವನ್ನು ಭಾವೈಕ್ಯ ದಿನವನ್ನಾಗಿ ಆಚರಿಸಲಾಗುವುದು. ಈ ಕುರಿತು ಸರಕಾರಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಅವರು ಇಂದು ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿಯ ವತಿಯಿಂದ ಆಯೋಜಿಸಿದ್ದ ತ್ರಿವಿಧ ದಾಸೋಹಮೂರ್ತಿ ಶ್ರೀ ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿಯ ಐಕ್ಯ ಮಂಟಪ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ಡಾ.ತೋಂಟದಸಿದ್ಧಲಿಂಗ ಸ್ವಾಮೀಜಿಯ ಜನ್ಮ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯ.
ಆಧ್ಯಾತ್ಮಿಕವಾಗಿ ಅವರ ಜ್ಞಾನ ಆಳವಾಗಿತ್ತು. ಆ ಆಳದ ಲೆಕ್ಕ ನಮಗ್ಯಾರಿಗೂ ಸಿಕ್ಕಿಲ್ಲ. ಅವರ ಲೌಕಿಕ ಜ್ಞಾನವೂ ಅಷ್ಟೇ ವಿಸ್ತಾರವಾಗಿತ್ತು. ಭಕ್ತರಿಗೆ ಜ್ಞಾನದ ಮೂಲಕ ಮಾರ್ಗದರ್ಶನ ಮಾಡಿದಾಗ ಅವರು ಸಂತೃಪ್ತರಾಗಿ ಬದುಕಿನ ಮಾರ್ಗವನ್ನು ಪಡೆದುಕೊಂಡು ಯಶಸ್ವಿಯಾಗಿದ್ದಾರೆ ಎಂದರು.
ಸ್ವಾಮೀಜಿ ಮನಸ್ಸು ಮಾಡಿದ್ದರೆ, ದೊಡ್ಡ ಸಂಸ್ಥೆಗಳನ್ನು ಕಟ್ಟಬಹುದಿತ್ತು. ಅವರ ಚಿಂತನೆಗಳು ಬೇರೆ. ಕಟ್ಟಡಗಳನ್ನು ಕಟ್ಟಲು ಮಹತ್ವ ನೀಡಲಿಲ್ಲ. ಮನುಷ್ಯರನ್ನು ಮನುಷ್ಯತ್ವದಿಂದ ಕಟ್ಟಲು ಪ್ರಯತ್ನ ಮಾಡಿದ್ದಾರೆ. ಆ ಮೂಲಕ ಸಾಮೂಹಿಕ ಚಿಂತನೆಯ ಸಮಾಜ ಕಟ್ಟಲು ಬಯಸಿದ್ದರು. ಹೊಗಳಿಕೆಗೆ ತೆಗಳಿಕೆಗೆ ಕಿವಿಗೊಡದೆ ಸ್ಥಿತಪ್ರಜ್ಞರಾಗಿದ್ದರು. ಆಧ್ಯಾತ್ಮಿಕವಾಗಿ ಬಹಳ ದೊಡ್ಡ ಸಾಧನೆ ಮಾಡಿದವರಿಗೆ ಮಾತ್ರ ಅದು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಲೊಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಸಂಸದ ಶಿವಕುಮಾರ ಉದಾಸಿ, ಶಾಸಕ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಮಾಜಿ ಸಚಿವ ಎಸ್.ಎಸ್.ಪಾಟೀಲ್, ಶ್ರೀ ಸಿದ್ದಲಿಂಗ ಮಹಾಸ್ವಾಮಿಯ ದುರದುಂಡಿಶ್ವರ ಮಠ ಅರಬಾವಿ, ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿ ತೋಂಟದಾರ್ಯ ಶಾಖಾಮಠ ಮುಂಡರಗಿ-ಬೈಲೂರ, ಶ್ರೀ ಗುರುಬಸವ ಮಹಾಸ್ವಾಮಿ ತೋಂಟದಾರ್ಯ ಶಾಖಾ ಮಠ ಶಿರೋಳ, ಶ್ರೀ.ಶಾಂತಲಿಂಗ ಮಹಾಸ್ವಾಮಿ ದೊರೆಸ್ವಾಮಿ ವೀರಕ್ತಮಠ ಭೈರನಟ್ಟಿ, ಗದಗ-ಬೆಟಗೇರಿ ನಗರ ಸಭೆ ಅಧ್ಯಕ್ಷೆ ಉಷಾ ದಾಸರ, ಉಪಾದ್ಯಕ್ಷೆ ಸುನಂದಾ ಬಾಕಳೆ, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿ.ಪಂ.ಸಿ.ಇ.ಒ. ಡಾ.ಸುಶೀಲಾ ಬಿ., ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ಸೇರಿದಂತೆ ಇತರರು ಉಪಸ್ಥಿತರಿದ್ದರು.







