"ಬಡವರ ಮೇಲೆ ತಾರತಮ್ಯವೆಸಗುವ ರೀತಿಯಲ್ಲಿ ಕಾನೂನುಗಳನ್ನು ರೂಪಿಸಲಾಗಿದೆ": ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ

Youtube/LiveLaw
ಹೊಸದಿಲ್ಲಿ: "ಬಡವರ ವಿರುದ್ಧ ತಾರತಮ್ಯ ಎಸಗುವ ರೀತಿಯಲ್ಲಿಯೇ ಭಾರತೀಯ ಕಾನೂನುಗಳನ್ನು ರೂಪಿಸಲಾಗಿದೆ, ಬಡ ವ್ಯಕ್ತಿಯೊಬ್ಬ ನ್ಯಾಯ ಪಡೆಯಲು ಹಲವು ಎಡರುತೊಡರುಗಳನ್ನು ಎದುರಿಸಬೇಕಿದೆ, ವ್ಯವಸ್ಥೆಯು ಬಡವರಿಗೆ ಬೇರೆಯೇ ರೀತಿಯಲ್ಲಿ ಕಾರ್ಯಾಚರಿಸುತ್ತದೆ" ಎಂದು ಒಡಿಶಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್ ಮುರಳೀಧರ್ ಹೇಳಿದ್ದಾರೆ.
ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆಯ ಸಂದರ್ಭ "ನ್ಯಾಯಾಲಯದ ಮುಂದೆ ಹಾಜರಾಗುವುದು: ದಮನಿತರನ್ನು ಪ್ರತಿನಿಧಿಸುವಲ್ಲಿ ಇರುವ ಸವಾಲುಗಳು" ಎಂಬ ವಿಷಯದ ಮೇಲೆ ಅವರು ಮಾತನಾಡುತ್ತಿದ್ದರು.
"ವಿಚಾರಣೆ ನಡೆಯಲು ಕಾಯುತ್ತಿರುವ 3.72 ಲಕ್ಷ ಭಾರತೀಯರ ಪೈಕಿ ಶೇ 55ರಷ್ಟು ಮಂದಿ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗಗಳವರು" ಎಂದು ಅವರು ಹೇಳಿದರು.
ವಿವಿಧ ಪ್ರಕರಣಗಳಲ್ಲಿ ಅಪರಾಧಿಗಳೆಂದು ನ್ಯಾಯಾಲಯದಿಂದ ಘೋಷಿತರಾದವರ ಪೈಕಿ ಶೇ 21ರಷ್ಟು ಮಂದಿ ಪರಿಶಿಷ್ಟ ಜಾತಿಗೆ ಹಾಗೂ ಶೇ 37.1ರಷ್ಟು ಮಂದಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು, ವಿಚಾರಣೆ ಎದುರಿಸುತ್ತಿರುವ ಶೇ 17ಕ್ಕೂ ಅಧಿಕ ಮಂದಿ ಹಾಗೂ ದೋಷಿಗಳೆಂದು ಘೋಷಿತರಾದ ಶೇ 19.5ರಷ್ಟು ಮಂದಿ ಮುಸ್ಲಿಮರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
"ಆದರೂ ಈ ಮಂದಿ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಮುಂದೆ ಬರಲು ಕಷ್ಟಪಡುತ್ತಿದ್ದಾರೆ" ಎಂದು ಜಸ್ಟಿಸ್ ಮುರಳೀಧರ್ ಹೇಳಿದರು. ಜಾಮೀನು ದೊರೆತವರಲ್ಲಿಯೂ ಹಲವು ಮಂದಿ ಬಾಂಡ್ ಏರ್ಪಾಟು ಮಾಡಲು ಸಾಧ್ಯವಾಗದೆ ಜೈಲಿನಲ್ಲಿಯೇ ಉಳಿಯುವಂತಾಗಿದೆ ಎಂದು ಅವರು ಹೇಳಿದರು.
ದಲಿತ ಹಾಗೂ ಆದಿವಾಸಿ ಸಮುದಾಯಗಳಿಗೆ ಸೇರಿದ ಮಾನವ ಹಕ್ಕು ವಕೀಲರುಗಳನ್ನು ʼಮಾವೋವಾದಿಗಳು ಅಥವಾ ನಕ್ಸಲೈಟ್ ವಕೀಲರುʼ ಎಂಬ ಹಣೆಪಟ್ಟಿ ಹೊತ್ತುಕೊಳ್ಳುವಂತಾಗಿದೆ ಎಂದು ಅಧ್ಯಯನವೊಂದನ್ನು ಉಲ್ಲೇಖಿಸಿ ಅವರು ಹೇಳಿದರು.







