"ಭಾರತ ಅಹಿಂಸೆಯ ಬಗ್ಗೆ ಮಾತನಾಡುತ್ತಲೇ ಕೋಲನ್ನೂ ಹಿಡಿಯುತ್ತದೆ": ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್
"ಸನಾತನ ಧರ್ಮದ ಉನ್ನತಿಯಾಗದೇ ಭಾರತ ಪ್ರಗತಿ ಕಾಣಲು ಸಾಧ್ಯವಿಲ್ಲ"

ಹೊಸದಿಲ್ಲಿ: "ಭಾರತವು ಅಹಿಂಸೆಯ ಬಗ್ಗೆ ಮಾತನಾಡುವಾಗ 'ಕೋಲನ್ನು' ಕೂಡ ಹಿಡಿದುಕೊಳ್ಳುತ್ತದೆ, ಜಗತ್ತು ಅಧಿಕಾರದ ಭಾಷೆಯನ್ನು ಮಾತ್ರ ಅರ್ಥ ಮಾಡಿಕೊಳ್ಳುತ್ತದೆ" ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.
ಬುಧವಾರ ಹರಿದ್ವಾರದಲ್ಲಿ ಸಂತರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು "ಸ್ವಾಮಿ ವಿವೇಕಾನಂದ ಮತ್ತು ಮಹರ್ಷಿ ಅರಬಿಂದೋ ಅವರ ಕನಸನ್ನು ಭಾರತದಲ್ಲಿ ಇನ್ನು ಕೇವಲ 10-15 ವರ್ಷಗಳಲ್ಲಿ ಸಾಕಾರಗೊಳಿಸಬಹುದು. ನೀವು 20-25 ವರ್ಷಗಳೆಂದಿದ್ದೀರಿ, ಆದರೆ ನಾನು 10-15 ವರ್ಷಗಳೆಂದು ಹೇಳುತ್ತೇನೆ. ಆ ಅವಧಿಯಲ್ಲಿ, ಸ್ವಾಮಿ ವಿವೇಕಾನಂದ ಹಾಗೂ ಮಹರ್ಷಿ ಅರಬಿಂದೋ ಅವರ ಪರಿಕಲ್ಪನೆಯ ಭಾರತವನ್ನು ನಾವು ನೋಡುತ್ತೇವೆ" ಎಂದು ಭಾಗ್ವತ್ ಹೇಳಿದರು.
"ಎಲ್ಲವನ್ನೂ ಒಮ್ಮೆಗೇ ಸಾಧಿಸಲು ಸಾಧ್ಯವಿಲ್ಲ. ನನಗೆ ಯಾವುದೇ ಅಧಿಕಾರವಿಲ್ಲ, ಅದು ಜನರ ಬಳಿ ಇದೆ, ಅವರ ಬಳಿ ನಿಯಂತ್ರಣವಿದೆ. ಅವರು ಸಿದ್ಧರಾದಾಗ ಎಲ್ಲರ ವರ್ತನೆ ಬದಲಾಗುತ್ತದೆ. ನಾವು ಅವರನ್ನು ಸಿದ್ಧಗೊಳಿಸುತ್ತಿದ್ದೇವೆ. ನೀವು ಕೂಡ ಮಾಡಿ. ನಾವು ಜತೆಯಾಗಿ ಭಯವಿಲ್ಲದೆ ನಡೆಯೋಣ. ನಾವು ಅಹಿಂಸೆಯ ಬಗ್ಗೆ ಮಾತನಾಡೋಣ, ಆದರೆ ನಾವು ಕೋಲನ್ನು ಕೂಡ ಹಿಡಿದು ನಡೆಯೋಣ. ಮತ್ತು ಆ ಕೋಲು ಭಾರವಾಗಿರುತ್ತದೆ" ಎಂದು ಭಾಗ್ವತ್ ಹೇಳಿದರು.
"ನಾವು ಯಾರ ಬಗ್ಗೆಯೂ ದ್ವೇಷ ಹೊಂದಿರುವುದಿಲ್ಲ, ಜಗತ್ತಿಗೆ ಅಧಿಕಾರ ಮಾತ್ರ ಅರ್ಥವಾಗುತ್ತದೆ. ನಮಗೆ ಶಕ್ತಿ ಬೇಕು ಹಾಗೂ ಅದು ಇತರರ ಕಣ್ಣಿಗೆ ಗೋಚರವಾಗಬೇಕು" ಎಂದು ಅವರು ಹೇಳಿದರು.
"ಧರ್ಮದ ಉನ್ನತಿಯಾಗದೆ ಭಾರತ ಪ್ರಗತಿ ಕಾಣಲು ಸಾಧ್ಯವಿಲ್ಲ. ಹಿಂದು ಧರ್ಮ ಮಾತ್ರ ಸನಾತನ ಧರ್ಮವಾಗಿದೆ. ಭಾರತದ ಪ್ರಗತಿ ಖಾತರಿಯಾಗಿದೆ, ಭಾರತದ ಹಾದಿಯಲ್ಲಿ ಇರುವ ಯಾರನ್ನೇ ಆದರು ತೆಗೆದು ಹಾಕಲಾಗುವುದು ಅಥವಾ ಮುಗಿಸಲಾಗುವುದು" ಎಂದು ಅವರು ಹೇಳಿದ್ದಾಗಿ thewire.in ವರದಿ ಮಾಡಿದೆ.