ಮೇ 10: ರಂಗಾಯಣದಿಂದ ಮಂಗಳೂರಿನಲ್ಲಿ 'ಪರ್ವ' ಮಹಾರಂಗ ಪ್ರಯೋಗ
ಮಂಗಳೂರು, ಎ.15: ಡಾ.ಎಸ್.ಎಲ್.ಭೈರಪ್ಪರ ಕಾದಂಬರಿ ಆಧಾರಿತ 32ನೇ ಮಹಾರಂಗ ಪ್ರಯೋಗ 'ಪರ್ವ' ರಂಗಾಯಣ ಕಲಾವಿದರಿಂದ ಮೇ 10ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ರಂಗಾಯಣ ಮೈಸೂರಿನ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸುಮಾರು 8 ತಾಸುಗಳ ಈ ಮಹಾರಂಗ ಪ್ರಯೋಗ ಬೆಳಗ್ಗೆ 10:30ಕ್ಕೆ ಆರಂಭಗೊಳ್ಳಲಿದೆ. 200 ರೂ. ಟಿಕೆಟ್ ದರ ವಿಧಿಸಲಾಗಿದೆ. ನಾಟಕದ ಮಧ್ಯೆ ತಲಾ 10 ನಿಮಿಷಗಳ ಚಹಾ ವಿರಾಮ ಮತ್ತು 30 ನಿಮಿಷಗಳ ಊಟದ ವಿರಾಮದೊಂದಿಗೆ ಸಂಜೆ 7ರವರೆಗೆ ನಡೆಯಲಿದೆ.
ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪರ 600 ಪುಟಗಳ ಕಾದಂಬರಿಯನ್ನು ಖ್ಯಾತ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿಯವರ ನಿರ್ದೇಶನದ ಮೂಲಕ ಮೈಸೂರು ರಂಗಾಯಣದ 50 ಕಲಾವಿದರ ತಂಡ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ರಂಗ ಪ್ರಯೋಗಕ್ಕೆ ಸಿದ್ಧಪಡಿಸಿದೆ. ಈ ರಂಗ ಪ್ರಯೋಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ, ರಾಷ್ಟ್ರದ 5 ಕಡೆಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಅಡ್ಡಂಡ ಕಾರ್ಯಪ್ಪ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ತುಳು ನಾಟಕ ಕಲಾವಿದರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ರಂಗಕರ್ಮಿ ವಿದ್ದು ಉಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು.