ಅಲ್-ಅಖ್ಸಾ ಮಸೀದಿಯ ಕಾಂಪೌಂಡ್ ಗೆ ದಾಳಿ ನಡೆಸಿದ ಇಸ್ರೇಲ್ ಸೇನೆ: ಕನಿಷ್ಠ 152 ಫೆಲೆಸ್ತೀನಿಯರಿಗೆ ಗಾಯ
300ಕ್ಕೂ ಹೆಚ್ಚು ಮಂದಿಯ ಬಂಧನ

Photo: Twitter
ಜೆರುಸಲೆಂ: ಇಸ್ರೇಲಿ ಪೊಲೀಸರು ಪೂರ್ವ ಜೆರುಸಲೆಂನಲ್ಲಿರುವ ಅಲ್-ಅಖ್ಸಾ ಮಸೀದಿಯ ಕಂಪೌಂಡ್ ಮೇಲೆ ಇಂದು ನಡೆಸಿದ ದಾಳಿ ಹಾಗೂ ನಂತರ ಅಲ್ಲಿ ಉಂಟಾದ ಹಿಂಸಾತ್ಮಕ ಘಟನೆಗಳಲ್ಲಿ ಕನಿಷ್ಠ 152 ಫೆಲೆಸ್ತೀನೀಯರು ಗಾಯಗೊಂಡಿದ್ದಾರೆಂದು ವರದಿಯಾಗಿದೆ.
ಶುಕ್ರವಾರ ಬೆಳ್ಳಂಬೆಳಗ್ಗೆ ಮಸೀದಿಯಲ್ಲಿ ಪವಿತ್ರ ರಮಝಾನ್ ತಿಂಗಳ ಪ್ರಾರ್ಥನೆಗೆ ಸೇರಿದ್ದ ಸಾವಿರಾರು ಮಂದಿ ಇರುವಾಗಲೇ ಇಸ್ರೇಲಿ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭ ಫೆಲೆಸ್ತೀನೀಯರು ಪೊಲೀಸರತ್ತ ಕಲ್ಲುಗಳನ್ನು ಎಸೆಯುತ್ತಿರುವುದು ಹಾಗೂ ಪೊಲಿಸರು ಅಶ್ರುವಾಯು ಸಿಡಿಸುತ್ತಿರುವುದು ಹಾಗೂ ಗ್ರೆನೇಡ್ ಬಳಸುತ್ತಿರುವ ವೀಡಿಯೊಗಳು ಹರಿದಾಡುತ್ತಿವೆ. ಪ್ರಾರ್ಥನೆಗೆ ಆಗಮಿಸಿದ ಹಲವಾರು ಮಂದಿ ಮಸೀದಿಯೊಳಗೆ ದಾಳಿ ವೇಳೆ ಆಶ್ರಯ ಪಡೆದಿರುವ ವೀಡಿಯೋಗಳೂ ಹೊರಬಿದ್ದಿವೆ.
ಹೆಚ್ಚಿನ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಹಾಗೂ ಅಲ್ಲಿನ ಒಬ್ಬ ಭದ್ರತಾ ಸಿಬ್ಬಂದಿಯ ಕಣ್ಣಿಗೆ ರಬ್ಬರ್ ಬುಲೆಟ್ ಗಾಯಗಳಾಗಿವೆ ಎಂದು ತಿಳಿದು ಬಂದಿವೆ. ಅದೇ ಸಮಯ ಮಸೀದಿಗೆ ಅಂಬುಲೆನ್ಸ್ ಬರುವುದು ಹಾಗೂ ರಕ್ಷಣಾ ಸಿಬ್ಬಂದಿ ಆಗಮಿಸುವುದಕ್ಕೂ ಇಸ್ರೇಲಿ ಪಡೆಗಳು ಅಡ್ಡಿ ಮಾಡಿವೆ ಎಂದು ಫೆಲೆಸ್ತೀನಿಯನ್ ರೆಡ್ ಕ್ರೆಸೆಂಟ್ ಹೇಳಿದೆ.
ಈ ದಾಳಿಯಲ್ಲಿ ಕನಿಷ್ಠ 300 ಫೆಲೆಸ್ತೀನೀಯರನ್ನು ಬಂಧಿಸಲಾಗಿದೆ ಎಂದು ಇಸ್ರೇಲಿ ಪೊಲೀಸರು ಹೇಳಿದ್ದರೆ ಫೆಲೆಸ್ತೀನಿ ಮೂಲಗಳ ಪ್ರಕಾರ ಬಂಧಿತರಾದವರ ಸಂಖ್ಯೆ 400 ಆಗಿದೆ.
ಇಸ್ಲಾಂ ಧರ್ಮದ ಮೂರನೇ ಅತ್ಯಂತ ಪವಿತ್ರ ಧಾರ್ಮಿಕ ಸ್ಥಳವೆಂದು ಪರಿಗಣಿತವಾಗಿರುವ ಈ ಮಸೀದಿ ಹಾಗೂ ಯಹೂದಿಗಳು ಟೆಂಪಲ್ ಮೌಂಟ್ ಎಂದು ಗೌರವಿಸುವ ಈ ಸ್ಥಳದಲ್ಲಿ ಬೆಳಗ್ಗಿನ ಪ್ರಾರ್ಥನೆಯ ಅಂತ್ಯದ ವೇಳೆ ಇದ್ದ ಹಿಂಸಾತ್ಮಕ ಗುಂಪನ್ನು ಚದುರಿಸಲು ಮಸೀದಿ ಕಂಪೌಂಡ್ ಪ್ರವೇಶಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
#Palestine | The Israeli occupation forces break the windows of Al Qibli mosque at Al Aqsa mosque to attack worshippers inside the mosque. pic.twitter.com/GgatAHt754
— Eye on Palestine (@EyeonPalestine) April 15, 2022
Israeli Occupation Forces currently assaulting worshippers in Al-Aqsa Mosque, Jerusalem pic.twitter.com/fnuGhsSfq2
— #FreeAhmadManasra (@m7mdkurd) April 15, 2022







