ಮಂಗಳೂರು: ಮುಸ್ಲಿಮ್ ವಿರೋಧಿ ಹಿಂಸಾಚಾರ ಖಂಡಿಸಿ ಪಿಎಫ್‌ಐ ಪ್ರತಿಭಟನೆ

ಮಂಗಳೂರು : ದೇಶಾದ್ಯಂತ ನಡೆಯುವ ಮುಸ್ಲಿಮ್ ವಿರೋಧಿ ಹಿಂಸಾಚಾರವನ್ನು ಖಂಡಿಸಿ ಮತ್ತು ಇದರ ಹಿಂದೆ ಸಂಘಪರಿವಾರದ ಕೈವಾಡವಿದೆ ಎಂದು ಆರೋಪಿಸಿ ಹಾಗೂ ಮುಸ್ಲಿಮರ ಮೇಲಿನ ದಾಳಿಗಳನ್ನು ನಿಲ್ಲಿಸುವಂತೆ ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಶುಕ್ರವಾರ ದ.ಕ.ಜಿಲ್ಲೆಯ ಮಂಗಳೂರು ನಗರ, ಬಿ.ಸಿ.ರೋಡ್, ಬಜ್ಪೆ, ಕಲ್ಲಡ್ಕ, ಉಪ್ಪಿನಂಗಡಿ, ಮಡಂತ್ಯಾರ್‌ನಲ್ಲಿ ಪ್ರತಿಭಟನೆ ನಡೆಯಿತು.
ನಗರದ ಮಿನಿ ವಿಧಾನ ಸೌಧದ ಮುಂದೆ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಿಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಇಜಾಸ್ ಅಹ್ಮದ್ ಭಾವನಾತ್ಮಕ ವಿಷಯವನ್ನು ಕೆದಕುವ ಮೂಲಕ ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವುದೇ ಸಂಘಪರಿವಾರದ ಉದ್ದೇಶವಾಗಿದೆ. ಇತ್ತೀಚಿನ ದಿನಗಳಲ್ಲಿ ಮುಸ್ಲಿಮರೊಂದಿಗೆ ವ್ಯಾಪಾರ ಮಾಡಬಾರದು, ಜಾತ್ರೋತ್ಸವಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಸಂಚಿನ ಮೂಲಕ ಸಂಘಪರಿವಾರವು ಸಮಾಜದಲ್ಲಿ ಒಡಕು ಸೃಷ್ಟಿಸಲು ಯತ್ನಿಸುತ್ತಿದೆ. ಇದಕ್ಕೆ ಯಾರೂ ಎಂದಿಗೂ ಅವಕಾಶ ಕಲ್ಪಿಸಬಾರದು ಎಂದರಲ್ಲದೆ, ಸಂಘ ಪರಿವಾರದ ಈ ಸಂಚನ್ನು ಪಿಎಫ್‌ಐ ಸೋಲಿಸಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪಿಎಫ್‌ಐ ದ.ಕ.ಜಿಲ್ಲಾ ಸಮಿತಿಯ ಸದಸ್ಯ ಹನೀಫ್ ಕಾಟಿಪಳ್ಳ, ನಗರಾಧ್ಯಕ್ಷ ಖಾದರ್ ಕುಳಾಯಿ, ಕಾರ್ಪೊರೇಟರ್ ಮುನೀಬ್ ಬೆಂಗರೆ, ಝಾಹಿದ್ ಮಲಾರ್, ಶಹೀದ್ ಕಿನ್ಯ, ಜೈನುದ್ದೀನ್ ಹರೇಕಳ ಮತ್ತಿತರರು ಪಾಲ್ಗೊಂಡಿದ್ದರು.





