ವೆಂಕಟರಮಣ ದೇವಸ್ಥಾನಕ್ಕೆ ನೂತನ ಟ್ರಸ್ಟಿಗಳ ಆಯ್ಕೆ; ವಿನಾಯಕ ಬಾಳಿಗ ಒತ್ತಾಯಿಸಿದ್ದ ಮರು ಲೆಕ್ಕ ಪರಿಶೋಧನೆಗೆ ಆಗ್ರಹ
ನೂತನ ಟ್ರಸ್ಟಿಗಳಿಗೆ ವಿಚಾರವಾದಿ ನರೇಂದ್ರನಾಯಕ್ ರಿಂದ ಬಹಿರಂಗ ಪತ್ರ

ನೂತನ ಟ್ರಸ್ಟಿಗಳು
ಮಂಗಳೂರು : ಜಿಎಸ್ಬಿ ಸಮುದಾಯದ ಪ್ರಮುಖ ದೇವಸ್ಥಾನವಾಗಿರುವ ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ಈ ಹಿಂದಿನ ಅವ್ಯವಹಾರಗಳ ಕುರಿತಂತೆ ಬಾಕಿಯಾಗಿರುವ ಮರು ಲೆಕ್ಕಪರಿಶೋಧನೆಗೆ ಕ್ರಮ ವಹಿಸಬೇಕು ಎಂದು ದೇವಸ್ಥಾನದ ನೂತನವಾಗಿ ಆಯ್ಕೆಯಾಗಿರುವ ಟ್ರಸ್ಟಿಗಳಿಗೆ ಬಹಿರಂಗ ಪತ್ರದ ಮೂಲಕ ವಿಚಾರವಾದಿ ನರೇಂದ್ರ ನಾಯಕ್ ಒತ್ತಾಯಿಸಿದ್ದಾರೆ.
ನೂತನವಾಗಿ ಆಯ್ಕೆಯಾಗಿರುವ ಟ್ರಸ್ಟಿಗಳಿಗೆ ಪತ್ರದ ಮೂಲಕ ಈ ಒತ್ತಾಯ ಮಾಡಿರುವ ನರೇಂದ್ರ ನಾಯಕ್, ‘‘ತಮ್ಮ ಆಯ್ಕೆಯ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ಹತ್ಯೆ ಪ್ರಕರಣದ ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರಿಗೆ ಫತ್ವಾ ಹೊರಡಿಸಿದ್ದರೂ, ನಿಮ್ಮ ಸ್ವಂತ ಬಲದಿಂದ ಗೆದ್ದ ನಾಲ್ಕು ಮಂದಿ ಟ್ರಸ್ಟಿಗಳಿಗೆ ಅಭಿನಂದನೆಗಳು. ನಿಮ್ಮ ಅಧಿಕಾರಾವಧಿಯು ಹಿಂದಿನ ಟ್ರಸ್ಟಿಗಳು ಎದುರಿಸಿರುವ ಗಂಭೀರ ಆರೋಪಗಳಿಂದ ಮುಕ್ತವಾಗುವ ನಿರೀಕ್ಷೆ ಇದೆ. ದೇವಾಲಯದ ನಿರ್ವಹಣೆಯ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲವಾದರೂ, ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಹತ್ಯೆ ಬಳಿಕ ದೇವಸ್ಥಾನ ಮತ್ತು ಸಮುದಾಯವನ್ನು ಒಳಗೊಂಡ ಸಂಪೂರ್ಣ ಜಾತ್ಯತೀಯ ಮತ್ತು ಸಾಮಾಜಿಕ ಸಮಸ್ಯೆಗಳಲ್ಲಿ ನಾನು ಭಾಗಿಯಾಗಿರುವ ಕಾರಣ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ನೀವು ನಾಲ್ಕು ಮಂದಿಯ ಜತೆ ಆಯ್ಕೆಯಾಗಿರುವ ಇನ್ನೋರ್ವ ಟ್ರಸ್ಟಿ, ಚಾರ್ಟರ್ಡ್ ಅಕೌಂಟೆಂಟ್ ಮಾಡಿದ್ದ ಲೆಕ್ಕ ಪರಿಶೋಧನೆಯನ್ನು ಪ್ರಶ್ನಿಸಿದ ಕಾರಣಕ್ಕಾಗಿಯೇ ವಿನಾಯಕ ಬಾಳಿಗರ ಹತ್ಯೆ ಆಗಿದೆ ಎಂಬ ಆರೋಪವೂ ಇದೆ. ಹಾಗಾಗಿ ಅವರನ್ನು ಈ ಪ್ರಕ್ರಿಯೆಯಿಂದ ಹೊರಗಿಟ್ಟು, ವಿನಾಯಕ ಬಾಳಿಗರ ಹತ್ಯೆ ಬಳಿಕ ಕಳೆದ ಸುಮಾರು ಆರು ವರ್ಷಗಳಿಂದ ಬಾಕಿಯಾಗಿರುವ ದೇವಸ್ಥಾನದ ಹಳೆ ಲೆಕ್ಕಪತ್ರಗಳ ಮರು ಅಡಿಟ್ ನಡೆಸಬೇಕು. ಹತ್ಯೆಗೀಡಾದ ವಿನಾಯಕ ಬಾಳಿಗರ ಸಹೋದರಿಯರು ಸೇರಿದಂತೆ ನಮ್ಮ ಹಲವರ ಸತತ ಪ್ರಯತ್ನದ ಹೊರತಾಗಿಯೂ ಮರು ಲೆಕ್ಕ ಪರಿಶೋಧನೆ ನಡೆದಿಲ್ಲ. ಇದು ದೇವಸ್ಥಾನದ ಆಡಳಿತದ ಸಮಗ್ರತೆಯ ಮೇಲೆ ಕರಿನೆರಳು ಬೀರಿರುವುದರಿಂದ ಮತ್ತು ಜನರ ಮನಸ್ಸಿನಲ್ಲಿ, ವಿಶೇಷವಾಗಿ ಸಾರ್ವಜನಿಕರಲ್ಲಿ ಅನುಮಾನಗಳು ಹುಟ್ಟಿಕೊಂಡಿ ರುವುದರಿಂದ, ಅದನ್ನು ಹೋಗಲಾಡಿಸಲು ಈ ಮರು ಲೆಕ್ಕಪರಿಶೋಧನೆಯನ್ನು ನಡೆಸಬೇಕು. ದೇವಸ್ಥಾನದ ಆಡಳಿತದ ಚುಕ್ಕಾಣಿ ಹಿಡಿದವರು ಅನುಮಾನಾಸ್ಪದವಾಗಿರಬೇಕು. ಹಾಗಾಗಿ ತಮ್ಮ ಸ್ವಂತ ಬಲದಿಂದ ಆಯ್ಕೆಯಾಗಿರುವ ನಾಲ್ವರು ಟ್ರಸ್ಟಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಾರೆಂಬ ಆಶಾವಾದ ನನ್ನದು’’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘‘ಆರ್ಟಿಐ ಕಾರ್ಯಕರ್ತರಾಗಿದ್ದ ವಿನಾಯಕ ಬಾಳಿಗ ಅವರು ದೇವಸ್ಥಾನದ ಲೆಕ್ಕಪತ್ರ ಮತ್ತು ಆಡಳಿತದಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂದು ಪ್ರಶ್ನಿಸಿ ಕ್ರಮಕ್ಕೆ ಮುಂದಾಗಿದ್ದರು. ಅದಕ್ಕಾಗಿ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರನ್ನು ಆಯ್ಕೆ ಮಾಡಲಾಗಿತ್ತು. 2016ರ ಎಪ್ರಿಲ್ 2ರಂದು ಮರು ಲೆಕ್ಕಪರಿಶೋಧನೆ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಈ ನಡುವೆ ಅವರು 2016ರ ಮಾರ್ಚ್ 21ರಂದು ಹತ್ಯೆಗೀಡಾಗಿದ್ದರು. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯೊಬ್ಬನ ಬಂಧನ ನಡೆದು ಬಳಿಕ ದೇವಸ್ಥಾನ ಮತ್ತು ಕಾಶಿ ಮಠದ ಆಡಳಿತದಲ್ಲಿ ಮಧ್ಯ ಪ್ರವೇಶಿಸಬಾರದು ಎಂಬ ಷರತ್ತಿನ ಮೇರೆಗೆ ಆರೋಪಿಗೆ ಜಾಮೀನು ದೊರಕಿತ್ತು. ಬಳಿಕ ದೇವಸ್ಥಾನದ ಆಡಳಿತ ಮಂಡಳಿಯ ಟ್ರಸ್ಟಿಗಳ ಸಂಖ್ಯೆ ಮೂರರಿಂದ ಐದಕ್ಕೇರಲ್ಪಟ್ಟಿತ್ತು. ಇದರ ಪ್ರಥಮ ಚುನಾವಣೆ ಇಂದು ನಡೆದಿದೆ. ಈ ಚುನಾವಣೆಯ ಹಿನ್ನೆಲೆಯಲ್ಲಿ ವಿನಾಯಕ ಬಾಳಿಗ ಹತ್ಯಾ ಪ್ರಕರಣದಲ್ಲಿ ಗುರುತಿಸಿಕೊಂಡಿದ್ದ ಆರೋಪಿಗಳು ಯೂತ್ ಆಫ್ ಜಿಎಸ್ಬಿ ಎಂಬ ಫೇಸ್ಬುಕ್ ಪೇಜ್ನ ಮೂಲಕ ತಮ್ಮದೇ ಆದ ಆಡಳಿತ ಸಮಿತಿಗೆ ಮುಂದಾಗಿ ದೇವಸ್ಥಾನದ ಆಡಳಿತವನ್ನು ತಮ್ಮ ತೆಕ್ಕೆಗೆ ಬೀಳಿಸಿಕೊಳ್ಳಲು ಪ್ರಯತ್ನಿಸಿದ್ದರೂ ಓರ್ವನನ್ನು ಹೊರತುಪಡಿಸಿ ಅವರ ಬೆಂಬಲಿತ ಅಭ್ಯರ್ಥಿಗಳನ್ನು ಜಯಗಳಿಸುವಲ್ಲಿ ವಿಫಲರಾಗಿದ್ದಾರೆ. ಇದೀಗ ನೂತನ ನಾಲ್ವರು ಟ್ರಸ್ಟಿಗಳಿಂದ ವಿನಾಯಕ ಬಾಳಿಗರ ಹೋರಾಟಕ್ಕೆ ನ್ಯಾಯ ದೊರಕುವ ಆಶಾವಾದ ವ್ಯಕ್ತವಾಗಿದೆ.’’
- ನರೇಂದ್ರ ನಾಯಕ್, ವಿಚಾರವಾದಿ.







