ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಲಾಡ್ಜ್ ಮ್ಯಾನೇಜರ್ ಹೇಳಿದ್ದೇನು ?

ದಿನೇಶ್
ಉಡುಪಿ : ರಾಜ್ಯದಲ್ಲಿ ರಾಜಕೀಯ ತಲ್ಲಣಗಳಿಗೆ ಕಾರಣವಾಗಿರುವ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ಉಡುಪಿ ಶಾಂಭವಿ ಲಾಡ್ಜ್ನ ಮ್ಯಾನೇಜರ್ ದಿನೇಶ್ ಇದೇ ಮೊದಲ ಬಾರಿ ‘ಸಾಯುವ ಮೊದಲು ಸಂತೋಷ್ ಚಲನವಲನ’ದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಮ್ಯಾನೇಜರ್ ದಿನೇಶ್, ಸಂತೋಷ್ ಪಾಟೀಲ್, ಇಬ್ಬರು ಸ್ನೇಹಿತರೊಂದಿಗೆ ಎ.11ರ ಸಂಜೆ 5ಕ್ಕೆ ಲಾಡ್ಜ್ನಲ್ಲಿ ರೂಮ್ ಬುಕ್ ಮಾಡಿದ್ದರು. ಸಂತೋಷ್ ಪಾಟೀಲ್ ಹೆಸರಲ್ಲಿ ರೂಂ ಬುಕ್ ಆಗಿತ್ತು. ಅವರು ಹಿಂಡೆಲಗಾ ವಿಳಾಸ ಕೊಟ್ಟು ಎರಡು ರೂಂ ಬುಕ್ ಮಾಡಿದ್ದರು. ಅದರಂತೆ ರೂಂ ನಂ.207ರಲ್ಲಿ ಸಂತೋಷ್ ಹಾಗೂ 209ರಲ್ಲಿ ಅವರ ಸ್ನೇಹಿತರಾದ ಸಂತೋಷ್ ಮೇದಪ್ಪ ಹಾಗೂ ಪ್ರಶಾಂತ್ ಶೆಟ್ಟಿ ತಂಗಿದ್ದರು ಎಂದರು.
ರೂಂ ಚೆಕ್ ಇನ್ ಆದ ಬಳಿಕ ಎಲ್ಲರೂ ಆ ಸಂಜೆ ಊಟಕ್ಕೆ ಹೊರಗೆ ಹೋಗಿ ರಾತ್ರಿ 8.59ಕ್ಕೆ ರೂಮಿಗೆ ಮರಳಿ ಬಂದಿದ್ದರು. ಬರುವಾಗ ಸಂತೋಷ್ ಪಾಟೀಲ್ ಕವರ್ನಲ್ಲಿ ಜ್ಯೂಸ್ ತಂದಿದ್ದರು. ಮರುದಿನ ಬೆಳಗ್ಗೆ 10.50ಕ್ಕೆ ಜೊತೆಯಲ್ಲಿದ್ದ ಸ್ನೇಹಿತರು ನಮ್ಮಲ್ಲಿ ಬಂದು ಸಂತೋಷ್ ಬಗ್ಗೆ ವಿಚಾರಿಸಿದ್ದಾರೆ. ಸಂತೋಷ್ ಪಾಟೀಲ್ ರೂಮಿನ ಬಾಗಿಲು ತೆಗೆಯುತ್ತಿಲ್ಲ. ಎಷ್ಟೇ ಕರೆ ಮಾಡಿದ್ರು ತೆಗೆಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದರು ಮ್ಯಾನೇಜರ್ ದಿನೇಶ್ ವಿವರಿಸಿದರು.
ಕೂಡಲೇ ರೂಂಬಾಯ್ ಕೈಯಲ್ಲಿ ನಕಲಿ ಬೀಗದ ಕೀ ಮೂಲಕ ಸಂತೋಷ್ ಇದ್ದ 207ರೂಮ್ನ ಬಾಗಿಲು ತೆಗೆದಾಗ ಸಂತೋಷ್ ಪಾಟೀಲ್ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದರು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ತಿಳಿಸಿದರು.
ಮೃತಪಟ್ಟಿದ್ದ ಆ ದಿನ ಬೆಳಗ್ಗೆ ಪೊಲೀಸರು ಸಂತೋಷ್ ಪಾಟೀಲ್ರನ್ನು ಕೇಳಿಕೊಂಡು ಲಾಡ್ಜ್ಗೆ ಬಂದಿದ್ದರು. ಬೆಳಗಾವಿ ವಿಳಾಸದೊಂದಿಗೆ ಫೋಟೋ ತೋರಿಸಿ ತಂಗಿದ್ದಾರಾ ಎಂದು ಪ್ರಶ್ನಿಸಿದ್ದರು. ಫೋಟೋ ನೋಡಿ ಪರಿಚಯ ಆಗಿಲ್ಲ. ಸಂತೋಷ್ ರೂಮ್ ಬುಕ್ ಮಾಡುವಾಗ ಹಿಂಡೆಲಗಾ ವಿಳಾಸ ಕೊಟ್ಟಿದ್ದರಿಂದ ಪೊಲೀಸರು ಬೆಳಗಾವಿ ಅಂದಾಗ ಗೊತ್ತಾಗಿಲ್ಲ. ಸದ್ಯ ನಮ್ಮಲ್ಲಿದ್ದ ಎಲ್ಲಾ ಸಿಸಿ ಟಿವಿ ದೃಶ್ಯಾವಳಿಗಳನ್ನು ಪೊಲೀಸರು ಕೊಂಡೊಯ್ದಿದ್ದಾರೆ. ಅಲ್ಲದೇ 207 ಹಾಗೂ 209 ರೂಮ್ನ್ನು ವಾರದ ಮಟ್ಟಿಗೆ ಯಾರಿಗೂ ಕೊಡಬೇಡಿ ಎಂದು ಪೊಲೀಸರು ಹೇಳಿದ್ದಾರೆ ಎಂದು ಮ್ಯಾನೇಜರ್ ದಿನೇಶ್ ತಿಳಿಸಿದರು.