ಆರೋಗ್ಯ ತಪಾಸಣೆಗೆ ಅವಕಾಶ; ಉಡುಪಿ ಡಿಸಿ, ಎಸ್ಪಿಗೆ ಮುತಾಲಿಕ್ ಧನ್ಯವಾದ
"ನನ್ನ ಹಿಂದುತ್ವದ ಪೂರ್ಣ ಲಾಭವನ್ನು ಬಿಜೆಪಿ ಪಡೆದುಕೊಂಡಿದೆ"

ಉಡುಪಿ : ಉಡುಪಿ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದರೂ, ನಂತರ ಆರೋಗ್ಯದ ತಪಾಸಣೆ ಮತ್ತು ಮಠ-ಮಂದಿರಗಳ ಭೇಟಿಗೆ ಅವಕಾಶ ಮಾಡಿ ನಿರ್ಬಂಧವನ್ನು ಸಡಿಲಿಕೆ ಮಾಡಿರುವುದಕ್ಕಾಗಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ತಾವು ಹೋದಲ್ಲೆಲ್ಲಾ ಕೋಮು ಪ್ರಚೋದಕ ಭಾಷಣಗಳಿಗೆ ಕುಖ್ಯಾತರಾದ ಮುತಾಲಿಕ್, ಇಂದು ಸಂಜೆ ಗಂಗೊಳ್ಳಿಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಸಂಬಂಧ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡುವ ಕಾರ್ಯಕ್ರಮವಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅವರ ಉಡುಪಿ ಜಿಲ್ಲಾ ಪ್ರವೇಶವನ್ನೇ ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಆದರೆ ನಿನ್ನೆ ರಾತ್ರಿ ಅವರು ಗಂಗೊಳ್ಳಿಯಲ್ಲಿ ಬಹಿರಂಗವಾಗಿ ಕೆಲವು ಸಂಘಟನೆಗಳ ಕಾರ್ಯಕರ್ತರೊಂದಿಗೆ ಕಾಣಿಸಿಕೊಂಡಿದ್ದರು.
‘ನಾನು ನಗರದ ಆದರ್ಶ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇನೆ. ವೈದ್ಯರು ತಪಾಸಣೆ ಮಾಡಿ ಕೆಲವು ಚಿಕಿತ್ಸೆಗಳನ್ನು ಹೇಳಿದ್ದಾರೆ. ವಯೋಸಹಜ ಕೆಲ ಸಮಸ್ಯೆಗಳು ಇವೆ. ಸಂಪೂರ್ಣವಾಗಿ ಆರೋಗ್ಯತಪಾಸಣೆ ಮಾಡುತ್ತೇನೆ. ಚಿಕಿತ್ಸೆಗಳು ಇದ್ದರೆ ಬೆಂಗಳೂರು ಅಥವಾ ಧಾರವಾಡದಲ್ಲಿ ಅಥವಾ ಉಡುಪಿಯಲ್ಲಿ ಚಿಕಿತ್ಸೆ ಪಡೆಯಬೇಕೇ ಎಂಬ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇನೆ.’ ಎಂದು ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಬಿಜೆಪಿ ನಿಲುವಿಗೆ ಖಂಡನೆ: ನನ್ನ ಹಿಂದುತ್ವದ ಪೂರ್ಣ ಲಾಭವನ್ನು ಬಿಜೆಪಿ ಪಡೆದುಕೊಂಡಿದೆ. ಮೇಲಿಂದ ಮೇಲೆ ಈ ರೀತಿಯ ಬಿಜೆಪಿ ವರ್ತನೆ ಸರಿಯಲ್ಲ. ಕಳೆದ ಆರು ವರ್ಷಗಳಿಂದ ಗೋವಾ ರಾಜ್ಯ ಪ್ರವೇಶಿಸದಂತೆ ಬ್ಯಾನ್ ಮಾಡಲಾಗಿದೆ. ಇದೀಗ ಕೋಲಾರ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳಲ್ಲೂ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದರು.
ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗಲೂ ಬ್ಯಾನ್ ನಿರ್ಧಾರ ಅನುಭವಿಸಬೇಕಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಇದ್ದಾಗ ಅದನ್ನು ಎದುರಿಸಲು ನಮ್ಮಲ್ಲಿ ಜೋಷ್ ಬರುತ್ತಿತ್ತು. ಅದನ್ನು ಎದುರಿಸುವುದು ಖುಷಿ ಅನ್ನಿಸುತ್ತಿತ್ತು. ಆದರೆ ಬಿಜೆಪಿ ಬ್ಯಾನ್ ನೋವು ತರುತ್ತದೆ. ಹಿಂದುತ್ವ ಸಂಘಟನೆಗಳಿಗೆ ಕೊಡುವ ಕಿರಿಕಿರಿ ನಾಳೆ ನಿಮಗೆ ತೊಂದರೆ ಆಗಲಿದೆ ಎಂದು ನಿಮಗೆ ನಾನು ಎಚ್ಚರಿಕೆ ಕೊಡುತ್ತಿದ್ದೇನೆ ಎಂದರು.
ಕಲ್ಲಂಗಡಿ ಒಡೆದದ್ದಕ್ಕೆ ಆರು ನಾನ್ ಬೇಲೆಬಲ್ ಸೆಕ್ಷನ್ ಹಾಕಲಾಗಿದೆ. ಈ ಮಾನಸಿಕತೆ ಸರಿಯಲ್ಲ. ಹಿಂದುತ್ವ ಸಂಘಟನೆಗಳನ್ನು ಶಿಕ್ಷಿಸುವುದು ಸರಿಯಲ್ಲ. ಈ ನಡವಳಿಕೆ, ನೀತಿಯನ್ನು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ಅನಾಹುತ ಆಗುತ್ತದೆ ಎಂದು ಎಚ್ಚರಿಸಿದರು.
ಈ ವಿಷಯದಲ್ಲಿ ಕಾಂಗ್ರೆಸ್‌ನ ನಿಲುವು ಒಂದೇ ಆಗಿತ್ತು. ಅಂದು ಪ್ರವೀಣ್ ತೊಗಾಡಿಯಾ ಅವರಿಗೆ ನಿರ್ಬಂಧ ಹಾಕಿದಾಗ ಬಿಜೆಪಿ ಅದನ್ನು ಗಟ್ಟಿ ದ್ವನಿಯಲ್ಲಿ ವಿರೋಧಿಸಿತ್ತು. ತೊಗಾಡಿಯಾ ಶೃಂಗೇರಿ ಪ್ರವೇಶಕ್ಕೆ ನಿರ್ಬಂಧ ಹೇರಿದಾಗ, ಈಶ್ವರಪ್ಪ ಶೃಂಗೇರಿ ಏನು ಪಾಕಿಸ್ತಾನದಲ್ಲಿ ಇದೆಯಾ ಎಂದು ಗುಡುಗಿದ್ದರು. ಆದರೆ ಇಂದು ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವಾಗ ಕಾಂಗ್ರೆಸ್‌ನ ಮಾನಸಿಕತೆಯನ್ನು ಬಿಜೆಪಿಯವರು ಮೆರೆಯುತ್ತಿದ್ದಾರೆ. ಗೋವಾ ರಾಜ್ಯಕ್ಕೆ ಕಳೆದ ಆರು ವರ್ಷದಿಂದ ನನಗೆ ಬ್ಯಾನ್ ಮಾಡಲಾಗಿದೆ. ಕಾಂಗ್ರೆಸ್ ನೀತಿಯನ್ನು ಬಿಜೆಪಿಯೂ ಅನುಕರಣೆ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಮಾನಸಿಕ ಕಿರಿಕಿರಿ ಸರಿಯಲ್ಲ: ಗಂಗೊಳ್ಳಿ ಘಟನೆ ಮೂಲಕ ರಾಜ್ಯದಾದ್ಯಂತ ಹಿಂದೂ ಜಾಗೃತಿಯಾಗಿದೆ. ಮುಸ್ಲಿಮರು ಹಿಂದೂ ಮೀನುಗಾರರಿಗೆ ನಿರ್ಬಂಧ ಹೇರಿದ್ದಾರೆ. ರಾಜ್ಯದ ಇಷ್ಟೆಲ್ಲ ಬೆಳವಣಿಗೆಗಳಿಗೆ ಕಾರಣ ರಾಜ್ಯ ಮತ್ತು ದೇಶದ ಹಿಂದುಗಳು ಜಾಗೃತರಾಗಿದ್ದಾರೆ. ಇದಕ್ಕೆ ಗಂಗೊಳ್ಳಿ ಹಿಂದುತ್ವ ಸಂಘಟನೆಗೆ ಧನ್ಯವಾದ ಹೇಳುತ್ತೇನೆ ಎಂದರು.
ಹಲವಾರು ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶ ಎಂದು ಹೇಳುತ್ತಾರೆ. ಮುಸ್ಲಿಮರ ಬಾಹುಳ್ಯ ಇರುವ ಜಾಗ ಸೂಕ್ಷ್ಮ ಪ್ರದೇಶವೇ? ಎಂದು ಪ್ರಶ್ನಿಸಿದ ಮುತಾಲಿಕ್, ಇದು ದೊಡ್ಡ ಗಂಡಾಂತರ ಆಗುವ ಬೆಳವಣಿಗೆ. ಹಿಂದೂಗಳ ಶಕ್ತಿ ಇರುವ ಪ್ರದೇಶಗಳು ಶಾಂತ ಪ್ರದೇಶಗಳಾಗಿರುತ್ತವೆ. ಸರಕಾರ ಮುಸಲ್ಮಾನ ಮಾನಸಿಕತೆ ತಿದ್ದುಕೊಳ್ಳಬೇಕು. ಮುಸ್ಲಿಮರನ್ನು ಈ ಮಟ್ಟಕ್ಕೆ ಬೆಳೆಸುತ್ತಿರುವುದೇ ಬಿಜೆಪಿ ಎಂದರು.
ಹಿಜಾಬ್ ಘಟನೆ ನಂತರ ಹಿಂದೂ ಉತ್ಕೃಷ್ಟ ಜಾಗೃತಿಯಾಗಿದೆ. ನಮ್ಮ ಧರ್ಮೀಯರು ಚಿಂತನೆ ನಡೆಸುವ ಹಲವಾರು ಬೆಳವಣಿಗೆಗಳು ನಡೆಯುತ್ತಿವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ. ಬಂಧನ ಸರಕಾರಕ್ಕೆ ಮತ್ತು ಕಾನೂನಿಗೆ ಬಿಟ್ಟದ್ದು. ಭ್ರಷ್ಟಾಚಾರರಿಂದ ಅಭಿವೃದ್ಧಿಗೆ ತೊಂದರೆ ಆಗುತ್ತಿದೆ. ಭ್ರಷ್ಟಾಚಾರದ ವಿಚಾರದಲ್ಲಿ ಎಲ್ಲಾ ಪಕ್ಷಗಳು ಗಂಭೀರ ಚಿಂತನೆ ಮಾಡಬೇಕು. ಈಶ್ವರಪ್ಪರದ್ದು ಒಂದು ಉದಾಹರಣೆ. ಭ್ರಷ್ಟಾಚಾರದ ಬಗ್ಗೆ ದೇಶವೇ ಚಿಂತನೆ ಮಾಡಬೇಕು ಇಲ್ಲವಾದಲ್ಲಿ ಭ್ರಷ್ಟಾಚಾರ ಇಡೀ ದೇಶವನ್ನು ನುಂಗಿ ಹಾಕುತ್ತದೆ ಎಂದವರು ಅಭಿಪ್ರಾಯ ಪಟ್ಟರು.
ಪಿಎಫ್‌ಐ ಬ್ಯಾನ್‌ಗೆ ಅಭಿಯಾನ: ದುಷ್ಟ ಸಮಾಜ ಘಾತುಕ ಪಿಎಫ್‌ಐನ್ನು ಬ್ಯಾನ್ ಮಾಡಬೇಕು. ಮೇ ಮೊದಲ ವಾರದಿಂದ ಬ್ಯಾನ್ ಪಿಎಫ್‌ಐ ಅಭಿಯಾನ ನಡೆಯುತ್ತದೆ. ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ತಾಲೂಕು ಕೇಂದ್ರಗಳಲ್ಲಿ ಶ್ರೀರಾಮ್ ಸೇನೆ ಈ ವಿಚಾರವನ್ನು ಇಟ್ಟುಕೊಂಡು ಹೋರಾಟ ನಡೆಸಲಿದೆ. ಬದಲಾಗುವ ತನಕ ನಮ್ಮ ಹೋರಾಟ ಮುಂದುವರೆಯುತ್ತದೆ. ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ, ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇವೆ ಎಂಬೂದು ಸರಿಯಲ್ಲ ಎಂದು ಉಡುಪಿಯಲ್ಲಿ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.