ತನಿಖೆ ನಡೆಸಿದರೆ ಬೊಮ್ಮಾಯಿ ಸಂಪುಟದ ಇನ್ನೂ ನಾಲ್ವರು ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು, ಎ. 15: ‘ರಾಜ್ಯ ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಗಂಭೀರ ಸ್ವರೂಪದ ತನಿಖೆ ನಡೆದರೆ ಸಮಾಜ ಕಲ್ಯಾಣ ಇಲಾಖೆಯ ಇಬ್ಬರು ಮಾಜಿ, ಹಾಲಿ ಸಚಿವರು ಸೇರಿ ಇನ್ನೂ ಮೂರ್ನಾಲ್ಕು ಮಂದಿ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಹೋರಾಟ ಕೇವಲ ಸಚಿವ ಈಶ್ವರಪ್ಪ ಅವರ ಶೇ.40 ಕಮಿಷನ್ ಭ್ರಷ್ಟಾಚಾರಕ್ಕೆ ಸೀಮಿತವಾಗಿಲ್ಲ. ಒಟ್ಟಾರೆ ಭ್ರಷ್ಟಾಚಾರ ಕಿತ್ತೊಗೆಯುವುದು ನಮ್ಮ ಉದ್ದೇಶ. ಭ್ರಷ್ಟಾಚಾರದಿಂದ ಜನರಿಗಾಗುತ್ತಿರುವ ಅನ್ಯಾಯವನ್ನು ತಡೆಯುವುದಾಗಿದೆ' ಎಂದು ಸ್ಪಷ್ಟನೆ ನೀಡಿದರು.
‘2019ರಿಂದ ಎರಡು ವರ್ಷಗಳ ಕಾಲ ಗಂಗ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರಗಳು ನಡೆದಿದೆ, ಸಚಿವರೊಬ್ಬರು ಕಿಕ್ಬ್ಯಾಕ್ ಪಡೆದಿದ್ದಾರೆಂಬ ಆರೋಪ ಕೇಳಿ ಬಂದಿದ್ದವು. ಆದಾಯ ತೆರಿಗೆ ಸಲ್ಲಿಕೆಯಲ್ಲೂ ಮಾಹಿತಿ ತಿರುಚಲಾಗಿತ್ತು. ಹಗರಣದ ಬಗ್ಗೆ ಪ್ರಸ್ತಾಪಿಸಿದಾಗ ಸರಕಾರ ತನಿಖೆಗೆ ಆದೇಶಿಸಿದೆ. ಆದರೆ, ತನಿಖೆ ಪ್ರಗತಿಯಲ್ಲಿದ್ದರೂ ಕಾಮಗಾರಿಗಳು ನಿಂತಿಲ್ಲ' ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
‘ಗೃಹ ಇಲಾಖೆ ಇತ್ತೀಚೆಗೆ 545 ಪಿಎಸ್ಸೈ ಹುದ್ದೆಗಳಿಗೆ ನೇಮಕಾತಿ ನಡೆಸಿದೆ. ಪರೀಕ್ಷೆಗೆ 70 ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದರು. ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳಿವೆ. ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳುತ್ತಿದ್ದಾರೆ. ಆರೋಪ ಕೇಳಿ ಬಂದು ಎರಡು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಎಚ್ಚೆತ್ತುಕೊಂಡಿದ್ದಾರೆ. ಅಕ್ರಮ ನಡೆದಿದೆ ಎಂದು ನೆನಪಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ. ಇಷ್ಟು ದಿನ ಮೌನವಾಗಿದ್ದು ಏಕೆ?' ಎಂದು ಅವರು ಪ್ರಶ್ನಿಸಿದರು.
‘ಪಿಎಸ್ಸೈ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ, ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಆರೋಪಗಳಿವೆ. ಈ ಹಗರಣದ ತನಿಖೆ ನಡೆದರೂ ಇನ್ನೆರಡು ವಿಕೆಟ್ ಬೀಳುವುದು ಖಚಿತ. ಗೃಹ, ಪಂಚಾಯತ್ ರಾಜ್, ಸಮಾಜಕಲ್ಯಾಣ ಇಲಾಖೆಗಳಲ್ಲಿನ ಭ್ರಷ್ಟಾಚಾರಗಳ ತನಿಖೆಯಾದರೆ ಬೊಮ್ಮಾಯಿ ಸಂಪುಟದಲ್ಲಿನ ನಾಲ್ಕು ವಿಕೆಟ್ ಬೀಳುವುದು ನಿಶ್ಚಿತ' ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.







