ಉ.ಪ್ರ.ದಲ್ಲಿ ಎಸ್ಪಿ ನಾಯಕ ರಯೀನ್ ರಾಜೀನಾಮೆ: ಮುಸ್ಲಿಮರ ವಿರುದ್ಧ ದೌರ್ಜನ್ಯಗಳ ಬಗ್ಗೆ ಅಖಿಲೇಶ್ ಮೌನಕ್ಕೆ ಆಕ್ರೋಶ

ಲಕ್ನೋ, ಎ.15: ಉತ್ತರಪ್ರದೇಶದಲ್ಲಿ ಮುಸ್ಲಿಮರ ವಿರುದ್ಧ ಎಸಗಲಾಗುತ್ತಿರುವ ದೌರ್ಜನ್ಯದ ಘಟನೆಗಳ ವಿರುದ್ಧ ಹೋರಾಡಲು ಅಖಿಲೇಶ್ ಯಾದವ್ ಹಾಗೂ ಪಕ್ಷದ ಇತರ ನಾಯಕರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲವೆಂದು ಆರೋಪಿಸಿ ಸಮಾಜವಾದಿ ಪಕ್ಷ (ಎಸ್ಪಿ)ದ ಸುಲ್ತಾನ್ಪುರ ಘಟಕದ ನಾಯಕ ಮುಹಮ್ಮದ್ ಕಾಸೀಂ ರಯಿನ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಎಸ್ಪಿ ಮುಖಂಡ ಆಝಂ ಖಾನ್ ಹಾಗೂ ಅವರ ಕುಟುಂಬಿಕರ ಬಂಧನ ಹಾಗೂ ಎಸ್ಪಿ ಶಾಸಕ ಶಾಝಿಲ್ ಇಸ್ಲಾಂ ಅಸಾರಿಯವರ ಪೆಟ್ರೋಲ್ ಪಂಪ್ ಧ್ವಂಸ ಸೇರಿದಂತೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರದ ಹಲವಾರು ಕೃತ್ಯಗಳ ವಿರುದ್ಧ ಅಖಿಲೇಶ್ ಯಾದವ್ ಹಾಗೂ ಅವರ ಪಕ್ಷದ ಪದಾಧಿಕಾರಿಗಳು ಧ್ವನಿಯೆತ್ತಿಲ್ಲವೆಂದು ಮುಹಮ್ಮದ್ ಖಾಸಿ ರಯೀನ್ ಹೇಳಿದ್ದಾರೆ.
‘‘ಈ ಎಲ್ಲಾ ವಿವಾದಗಳಲ್ಲಿ ಸಮಾಜವಾದಿ ಪಕ್ಷದ ನಿರ್ಲಿಪ್ತತೆಯು, ಆ ಪಕ್ಷವು ಮುಸ್ಲಿಂ ಸಮುದಾಯದ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತಲು ಹೆಚ್ಚಿನ ಆಸಕ್ತಿಯನ್ನು ಹೊಂದಿಲ್ಲವೆಂದು ಅವರು ತಿಳಿಸಿದರು.
ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಕಳೆದ ವಾರ ಎಸ್ಪಿ ಶಾಸಕ ಅನ್ಸಾರಿಯವರ ವಿರುದ್ಧ ಪ್ರಕರಣ ದಾಖಲಾದ ಬಳಿಕ ಅರ ಒಡೆತನದ ಪೆಟ್ರೋಲ್ ಬಂಕ್ ಒಂದನ್ನು ನೆಲಸಮಗೊಳಿಸಲಾಗಿತ್ತು. ಬರೇಲಿ-ದಿಲ್ಲಿ ಹೆದ್ದಾರಿಯ ಪರಾಸ್ಖೇಡಾದಲ್ಲಿರುವ ಈ ಪೆಟ್ರೋಲ್ ಪಂಪ್ ಅನ್ನು ಅನಧಿಕೃತವಾಗಿ ನಿರ್ಮಿಸಲಾಗಿತ್ತೆಂದು ಅಧಿಕಾರಿಗಳು ಆರೋಪಿಸಿದ್ದರು.
ಈಗ ಬಂಧನದಲ್ಲಿರುವ ಅಝಂಖಾನ್ ಅವರನ್ನು ಅಖಿಲೇಶ್ ಯಾದವ್ ಭೇಟಿಯಾಗುತ್ತಿಲ್ಲವೆಂದು ಅಝಂ ಅವರ ಮಾಧ್ಯಮ ಉಸ್ತುವಾರಿ ಅಲಿ ಖಾನ್ ಸಾನು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವಾರು ವರ್ಷಗಳಿಂದ ಅಝಂ ಖಾನ್ ಅವರನ್ನು ಅಖಿಲೇಶ್ ಕಡೆಗಣಿಸುತ್ತಲೇ ಬಂದಿದ್ದಾರೆಂದು ಆರೋಪಿಸಿದ್ದಾರೆ.
ರಾಮಪುರದಲ್ಲಿ ರವಿವಾರ ನಡೆದ ಸಮಾಜವಾದಿ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಫಸಾಹತ್ ಅವರು ‘‘ ಅಝಂ ಖಾನ್ ಜೈಲಿನಿಂದ ಹೊರಬರುವುದನ್ನು ಅಖಿಲೇಶ್ ಯಾದವ್ ಬಯಸುತ್ತಿಲ್ಲ. ನಾವು ನಿಮ್ಮನ್ನು(ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ಯಾದವ್) ಮುಖ್ಯಮಂತ್ರಿಗಳನ್ನಾಡಿ ಮಾಡಿದ್ದೆವು. ಆದರೂ ನೀವು ಅಝಂ ಖಾನ್ ಅವರನ್ನು ಸದನದಲ್ಲಿ ಪ್ರತಿಪಕ್ಖ ನಾಯಕರನ್ನಾಗಿ ಮಾಡಲಿಲ್ಲ’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.