ಕಡಿತಗೊಂಡಿದ್ದ ಏರ್ ಇಂಡಿಯಾ ಉದ್ಯೋಗಿಗಳ ವೇತನ ಹಂತ ಹಂತವಾಗಿ ಹೆಚ್ಚಳ

ಹೊಸದಿಲ್ಲಿ,ಎ.15: ದೇಶದಲ್ಲಿ ಕೋವಿಡ್-19 ಪ್ರಕರಣಗಳ ಇಳಿಮುಖದೊಂದಿಗೆ ವಾಯುಯಾನ ಉದ್ಯಮವು ಕೊರೋನಾ ಸಾಂಕ್ರಾಮಿಕ ಪೂರ್ವದ ದಿನಗಳ ಮಟ್ಟಕ್ಕೆ ಹಂತಹಂತವಾಗಿ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾವು ತನ್ನ ಉದ್ಯೋಗಿಗಳ ವೇತನವನ್ನು ಎಪ್ರಿಲ್ 1ರಿಂದ ಅನ್ವಯವಾಗುವಂತೆ ಮರುಸ್ಥಾಪಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಕೊರೋನಾ ಸಾಂಕ್ರಾಮಿಕದ ಹಾವಳಿಯ ಕಾರಣದಿಂದಾಗಿ ಭಾರತದ ವಾಯುಯಾನ ವಲಯಕ್ಕೆ ಭಾರೀ ಹೊಡೆತ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಎಲ್ಲಾ ವಾಯುಯಾನ ಸಂಸ್ಥೆಗಳು ತಮ್ಮ ಸಿಬ್ಬಂದಿಯ ವೇತನಗಳನ್ನು ಕಡಿತಗೊಳಿಸಿದ್ದವು.
ಕೊರೋನಾ ಸಾಂಕ್ರಾಮಿಕವು ಉತ್ತುಂಗವನ್ನು ತಲುಪಿದ್ದಾಗ ಪೈಲಟ್ ಗಳ ವಿಮಾನಯಾನ ಭತ್ತೆ,ವಿಶೇಷ ವೇತನ ಹಾಗೂ ವೈಡ್ ಬಾಡಿ ಆಲೊವೆನ್ಸ್ (ಡಬ್ಲುಬಿ) ಭತ್ತೆಗಳನ್ನು ಕ್ರಮವಾಗಿ ಶೇ.35, ಶೇ.25 ಹಾಗೂ ಶೇ. 20ರಷ್ಟು ಕಡಿತಗೊಳಿಸಲಾಗಿದೆ.
ಈ ವರ್ಷದ ಎಪ್ರಿಲ್ 1ರಿಂದ ಪೈಲಟ್ಗಳ ಹಾರಾಟ ಭತ್ತೆ, ವಿಶೇಷ ವೇತನ ಹಾಗೂ ಡಬ್ಸುಬಿ ಭತ್ತೆಗಳನ್ನು ಕ್ರಮವಾಗಿ ಶೇ.15 ಹಾಗೂ ಶೇ. 20 ಹಾಗೂ 25ರಷ್ಟು ಮರುಸ್ಥಾಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕ್ಯಾಬಿನ್ ಸಿಬ್ಬಂದಿಯ ವಾಯುಯಾನ ಭತ್ತೆ ಹಾಗೂ ಡಬ್ಲುಬಿ ಭತ್ತೆಯನ್ನು ಎಪ್ರಿಲ್ 1ರಿಂದ ಕ್ರಮವಾಗಿ ಶೇ.10 ಹಾಗೂ ಶೇ.5ರಷ್ಟು ಮರುಸ್ಥಾಪಿಸಲಾಗಿದೆ. ಕೊರೋನ ಹಾವಳಿಯ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಯ ಭತ್ತೆಗಳನ್ನು ಎಪ್ರಿಲ್ 1ರಿಂದ ಕ್ರಮವಾಗಿ ಶೇ.50 ಹಾಗೂ ಶೇ.30ರಷ್ಟು ಕಡಿತಗೊಳಿಸಲಾಗಿತ್ತು.
ಅಧಿಕಾರಿ ವರ್ಗದ ವೇತನವನ್ನು ಕೂಡಾ ಎಪ್ರಿಲ್ 1ರಿಂದ ಆನ್ವಯವಾಗುವಂತೆ ಶೇ.25ರಷ್ಟು ಮರುಸ್ಥಾಪಿಸಲಾಗಿದೆ. ಕೋವಿಡ್19 ಸಾಂಕ್ರಾಮಿಕದ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಯ ಭತ್ತೆಯನ್ನು ಶೇ.50 ಹಾಗೂ ಶೇ.30ರಷ್ಟು ಕಡಿತಗೊಳಿಸಲಾಗಿತ್ತು. ಇತರ ಸಿಬ್ಬಂದಿಯ ವೇತನವನ್ನು ಕೂಡಾ ಕೋವಿಡ್ ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಮರುಸ್ಥಾಪಿಸಲಾಗುವುದೆಂದು ಮೂಲಗಳು ತಿಳಿಸಿವೆ.







