ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನಷ್ಟದಲ್ಲಿಲ್ಲ: ಬ್ಯಾಂಕ್ ಆಡಳಿತ ಮಂಡಳಿ ಸ್ಪಷ್ಟನೆ
ಮಾಧ್ಯಮಗಳಲ್ಲಿ ತಪ್ಪು ಸಂದೇಶ
ಬೆಂಗಳೂರು, ಎ.15: ನಷ್ಟದಲ್ಲಿರುವ 41 ಬ್ಯಾಂಕ್‍ಗಳ ಪಟ್ಟಿಯಲ್ಲಿ ದಿ ಭಾರತ್ ಕೋ-ಆಪರೇಟೀವ್ ಬ್ಯಾಂಕ್ ಒಂದಾಗಿದೆ ಎಂದು ಮಾಧ್ಯಮಗಳು ಬಿಂಬಿಸಿವೆ. ಇದು ಸತ್ಯಕ್ಕೆ ದೂರವಾಗಿದ್ದು, ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ. ತಪ್ಪು ಸಂದೇಶಗಳಿಂದ ಠೇವಣಿದಾರರು ಹಾಗೂ ಗ್ರಾಹಕರು ಭಯಪಡಬಾರದು ಎಂದು ದಿ ಭಾರತ್ ಕೋ-ಆಪರೇಟೀವ್ ಬ್ಯಾಂಕ್‍ನ ಆಡಳಿತ ಮಂಡಳಿಯು ತಿಳಿಸಿದೆ.
ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಎಂ. ವೀರಪ್ಪ ಮಾತನಾಡಿ, 2020-21ನೇ ಸಾಲಿನಲ್ಲಿ ಹೂಡಿಕೆಗಳ ಮೇಲೆ ಆರ್‍ಬಿಐ ವಿಧಿಸಿದ್ದ ಮಾರ್ಗಸೂಚಿಗಳಿಂದಾಗಿ ಬ್ಯಾಂಕ್‍ನ ಪ್ರಗತಿಗೆ ತೊಡಕಾಗಿತ್ತು. ಆದರೆ 2021-22ನೇ ಆರ್ಥಿಕ ಸಾಲಿನಲ್ಲಿ 10 ಕೋಟಿ ರೂ.ಗಳಿಗಿಂತ ಅಧಿಕ ಲಾಭ ಗಳಿಸಿದೆ. ಹಾಗೆಯೇ ಲೆಕ್ಕಪರಿಶೋದನಾ ವರದಿಯಲ್ಲಿ ಮತ್ತು ರಿಸರ್ವ್ ಬ್ಯಾಂಕ್ ನಡೆಸಿದ ಪರಿವೀಕ್ಷಣಾ ವರದಿಯಲ್ಲಿ ಯಾವುದೇ ಹಣ ದುರುಪಯೋಗ ಪ್ರಕರಣಗಳು ಕಂಡುಬಂದಿಲ್ಲ. ಆದರೆ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯನ್ನು ನೀಡಲಾಗಿದೆ. ಬ್ಯಾಂಕ್‍ನ ಹಿತಾಸಕ್ತಿಗಳನ್ನು ಕಾಪಾಡಲು ಹಾಗೂ ಭವಿಷ್ಯದಲ್ಲಿ ಬ್ಯಾಂಕಿನ ಪ್ರಗತಿಗಾಗಿ ಶ್ರಮಿಸಲು ಆಡಳಿತ ಮಂಡಳಿಯು ಬದ್ಧವಾಗಿದೆ ಎಂದರು.
ಗೋಷ್ಠಿಯಲ್ಲಿ ಬ್ಯಾಂಕಿನಲ್ಲಿ ಬ್ಯಾಂಕಿನ ನಿರ್ದೇಶಕಿ ಅನಿತಾ, ನಂದಿನಿ, ನಂಜುಂಡೇಗೌಡ, ಗಂಗಾಧರ, ಪಿಳ್ಳ ರಾಯಪ್ಪ, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.





