ಮೈಸೂರು | ಕುರಿ ಮೇಯಿಸಲು ಹೋಗಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಓರ್ವ ಆರೋಪಿಯ ಬಂಧನ

ಮೈಸೂರು: ಕುರಿ ಮೇಯಿಸಲು ಹೋಗಿದ್ದ ಮಹಿಳೆ ಮೇಲೆ ಅದೇ ಗ್ರಾಮದ ಮೂವರು ಸಾಮೂಹಿ ಅತ್ಯಾಚಾರ ಎಸಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಎಪ್ರಿಲ್ 11 ರಂದು ಈ ಘಟನೆ ನಡೆದಿದ್ದು, ಅಂದು ಸಂತ್ರಸ್ತ ಮಹಿಳೆ ಕುರಿ ಮೇಯಿಸಲು ತೆರಳಿದ್ದು, ರಾಜು ಎಂಬಾತನ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದಳು ಎನ್ನಲಾಗಿದೆ. ಈ ವೇಳೆ ಅಲ್ಲಿಗೆ ಆಗಮಿಸಿದ ರಾಜು ಆಕೆಯನ್ನು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿ ಬಲವಂತವಾಗಿ ಎಳೆದಾಡಿದ್ದಾನೆ. ಇದಕ್ಕೆ ಆಕೆ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಬಳಿಕ ಆತನ ಸ್ನೇಹಿತರಾದ ರವಿ ಮತ್ತು ಪುಟ್ಟಣ್ಣ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಈ ವೇಳೆ ಮೂವರು ಆಕೆಯನ್ನು ಬಲವಂತವಾಗಿ ಪೊದೆಯೊಳಕ್ಕೆ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ದೂರಲಾಗಿದೆ.
ಇದರಿಂದ ತೀವ್ರ ಅಸ್ವಸ್ಥಗೊಂಡ ಮಹಿಳೆ ಸ್ಥಳದಲ್ಲೇ ಬಿದ್ದಿದ್ದಾಳೆ. ಕುರಿಗಳು ಮಾತ್ರ ಮನೆಗೆ ಹೋಗಿದ್ದು, ತನ್ನ ಪತ್ನಿ ಬರದಿರುವುದನ್ನು ಕಂಡು ಪತಿ ಕುರಿ ಮೇಯಿಸುತ್ತಿದ್ದ ಸ್ಥಳಕ್ಕೆ ತರಳಿದಾಗ ಪತ್ನಿ ಅಸ್ವಸ್ಥಳಾಗಿ ಬಿದ್ದಿರುವುದು ಕಂಡು ಬಂದಿದೆ.
ಕೂಡಲೇ ಸಂತ್ರಸ್ತೆಯನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತಾದರೂ ಸಂತ್ರಸ್ತ ಮಹಿಳೆ ಆತಂಕಗೊಂಡು ಅತ್ಯಾಚಾರದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾಳೆ. ಈಕೆಯನ್ನು ತಪಾಸಣೆ ಮಾಡಿದ ವೈದ್ಯರು ಈಕೆಯನ್ನು ವಿಚಾರಿಸಲಾಗಿ ಎರಡು ದಿನಗಳ ನಂತರ ನಡೆದ ವಿಚಾರವನ್ನು ತಿಳಿಸಿದ್ದಾಳೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ದೊಡ್ಡ ಕೌವಲಂದೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಹೇಂದ್ರ ಆರೋಪಿ ರಾಜುವನ್ನು ಬಂಧಿಸಿದ್ದು,
ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.







