ಐಪಿಎಲ್: ರಾಹುಲ್ ತ್ರಿಪಾಠಿ, ಮಾರ್ಕ್ರಾಮ್ ಅರ್ಧಶತಕ, ಸನ್‌ರೈಸರ್ಸ್‌ಗೆ 7 ವಿಕೆಟ್ ಜಯ

ಮುಂಬೈ, ಎ.15: ರಾಹುಲ್ ತ್ರಿಪಾಠಿ (71 ರನ್, 37 ಎಸೆತ, 4 ಬೌಂಡರಿ, 6 ಸಿಕ್ಸರ್) ಹಾಗೂ ಮಾರ್ಕ್ರಾಮ್(ಔಟಾಗದೆ 68, 36 ಎಸೆತ, 6 ಬೌಂಡರಿ, 4 ಸಿಕ್ಸರ್) ಸಿಡಿಸಿದ ಅರ್ಧಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್‌ನ 25ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿತು.
ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 176 ರನ್ ಬೆನ್ನಟ್ಟಿದ ಹೈದರಾಬಾದ್ 17.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಹೈದರಾಬಾದ್ ಅಭಿಷೇಕ್ ಶರ್ಮಾ(3 ರನ್) ಹಾಗೂ ಕೇನ್ ವಿಲಿಯಮ್ಸನ್(17 ರನ್)ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಆಗ ಜೊತೆಯಾದ ರಾಹುಲ್ ಹಾಗೂ ಮಾರ್ಕ್ರಾಮ್ 3ನೇ ವಿಕೆಟ್ ಜೊತೆಯಾಟದಲ್ಲಿ 94 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ತ್ರಿಪಾಠಿ ಔಟಾದ ಬಳಿಕ ನಿಕೊಲಸ್ ಪೂರನ್(ಔಟಾಗದೆ 5 ರನ್) ಅವರೊಂದಿಗೆ 4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 43 ರನ್ ಸೇರಿಸಿದ ಮಾರ್ಕ್ರಾಮ್ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ ಮಧ್ಯಮ ಕ್ರಮಾಂಕದ ಬ್ಯಾಟರ್ ನಿತೀಶ್ ರಾಣಾ ಗಳಿಸಿದ ಆಕರ್ಷಕ ಅರ್ಧಶತಕ(54 ರನ್, 36 ಎಸೆತ, 6 ಬೌಂಡರಿ, 2 ಸಿಕ್ಸರ್)ಹಾಗೂ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ (ಔಟಾಗದೆ 49 ರನ್, 25 ಎಸೆತ, 4 ಬೌಂಡರಿ, 4 ಸಿಕ್ಸರ್)ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 175 ರನ್ ಗಳಿಸಿತು.





