ಬೆಂಗಳೂರು: ನಿವೃತ್ತ ಯೋಧನ ಕೊಲೆ ಪ್ರಕರಣ; ಆರೋಪಿಗಳ ಬಂಧನ

ಬೆಂಗಳೂರು, ಎ.15: ಒಂಟಿಯಾಗಿ ವಾಸಿಸುತ್ತಿದ್ದ ನಿವೃತ್ತ ಯೋಧರೊಬ್ಬರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪದಡಿ ಆಂಧ್ರಪ್ರದೇಶದ ಐವರು ಸೋದರ ಸಂಬಂಧಿ ಆರೋಪಿಗಳನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಬು, ಮುರುಳಿ, ಗಜೇಂದ್ರ ನಾಯಕ್, ರಾಜೇಂದ್ರ ನಾಯಕ್ ಮತ್ತು ದೇವೇಂದ್ರ ನಾಯಕ್ ಬಂಧಿತ ಆರೋಪಿಗಳು. ಇವರೆಲ್ಲರೂ ಸೋದರ ಸಂಬಂಧಿಗಳು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಬಾಬು ಮಣಿಪಾಲ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದ. ದೊಮ್ಮಲೂರಿನ ಗೌತಮ್ ಕಾಲನಿಯಲ್ಲಿ ವಾಸವಿದ್ದ ಜ್ಯೂಡ್ ತೆಡ್ಡಾಸ್ ಯಾನೆ ಸುರೇಶ್ ಎಂಬ ನಿವೃತ್ತ ಯೋಧರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ, ಶ್ವಾನದಳಕ್ಕೆ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಮನೆಯಲೆಲ್ಲ ಖಾರದಪುಡಿ ಎರಚಿ ಪರಾರಿಯಾಗಿದ್ದರು.
ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ತಾಂತ್ರಿಕ ಹಾಗೂ ವೈಜ್ಞಾನಿಕ ಮಾಹಿತಿಯ ಮೂಲಕ ಆರೋಪಿಗಳ ಜಾಡು ಹಿಡಿದು ಆರೋಪಿಗಳನ್ನು ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.





