ಹೆಚ್ಚುತ್ತಿರುವ ಮುಸ್ಲಿಂ ದೌರ್ಜನ್ಯ: ಪ್ರಧಾನಿಗಾಗಿ ವಿಶೇಷ ಮೇಜು ತಯಾರಿಕೆ ಆಫರ್ ತಿರಸ್ಕರಿಸಿದ ಕುನಾಲ್ ಮರ್ಚಂಟ್

ಹೊಸದಿಲ್ಲಿ, ಎ.15: ದೇಶದ ವಿವಿಧೆಡೆ ವರದಿಯಾಗಿರುವ ಮುಸ್ಲಿಂ ವಿರೋಧಿ ಹಿಂಸಾಚಾರದ ಬಗ್ಗೆ ಆಡಳಿತಾರೂಢ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವೌನ ವಹಿಸಿರುವುದಕ್ಕೆ ಪ್ರತಿಭಟನೆಯಾಗಿ ಅವರಿಗೆ ಮೇಜೊಂದನ್ನು ನಿರ್ಮಿಸಿಕೊಡಲು ಖ್ಯಾತ ವಿನ್ಯಾಸಕಾರ ಕುನಾಲ್ ಮರ್ಚಂಟ್ ನಿರಾಕರಿಸಿದ್ದಾರೆ. ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಹಾಗೂ ಸರಕಾರದ ‘ಪಕ್ಷಪಾತಭರಿತ’ ಹಾಗೂ ‘ದ್ವೇಷಯುತ ಭಾರತ’ವನ್ನು ವಿರೋಧಿಸಿ ಈ ನಿರ್ಧಾರ ಕೈಗೊಂಡಿರುದಾಗಿ ಅವರು ಹೇಳಿದ್ದಾರೆ.
ಪ್ರಧಾನಿ ಮೋದಿಯವರಿಗೆ ವಿಶೇಷವಾದ ಬಳಕೆಗಾಗಿ ಮೇಜೊಂದನ್ನು ನಿರ್ಮಿಸಿಕೊಡುವಂತೆ ತನಗೆ ಪ್ರಧಾನಿ ಮೋದಿಯವರ ಖಾಸಗಿ ಕಾರ್ಯದರ್ಶಿ ವಿವೇಕ್ಕುಮಾರ್ ಅವರಿಂದ ಎಪ್ರಿಲ್ 12ರಂದು ಬಂದಿದ್ದ ಇಮೇಲ್ ಪತ್ರದ ಸ್ಕ್ರೀನ್ಶಾಟ್ ಅನ್ನು ಕುನಾಲ್ ಮರ್ಚಂಟ್ ಅವರು ‘ಇನ್ಸ್ಟ್ರಾಗ್ರಾಂ ಸ್ಟೋರೀಸ್’ನಲ್ಲಿ ಶೇರ್ ಮಾಡಿದ್ದಾರೆ. ಪ್ರಧಾನಿಯವರ ವಿಶೇಷ ಉಪಯೋಗಕ್ಕಾಗಿ ಖಾಯಂ ಆಗಿ ಸ್ಥಾಪಿಸುವಂತಹ ವಿಶೇಷ ಮೇಜೊಂದನ್ನು ವಿನ್ಯಾಸಗೊಳಿಸಿ ನಿರ್ಮಿಸುವಂತೆ ಇಮೇಲ್ ಪತ್ರದಲ್ಲಿ ಮರ್ಚಂಟ್ ಅವರಿಗೆ ತಿಳಿಸಲಾಗಿತ್ತು.
ಪರಕೀಯರನ್ನು ಸ್ವೀಕರಿಸುವಂತಹ 7 ಸಾವಿರಕ್ಕೂ ಅಧಿಕ ಇತಿಹಾಸ ಹೊಂದಿರುವ ಭಾರತದ ಜಾತ್ಯತೀತ, ಬಹುತ್ವವಾದಿ, ಸಹಿಷ್ಣುತೆಯ ಹಾಗೂ ನಾಗರಿಕತೆಯ ಶಕ್ತಿಯಲ್ಲಿ ತಾನು ನಂಬಿಕೆಯಿಟ್ಟಿರುವುದಾಗಿ ಕುಣಾಲ್ ಮರ್ಚಂಟ್ ಹೇಳಿದ್ದಾರೆ.
ನನ್ನ ಶೇ.20ರಷ್ಟು ಸಹನಾಗರಿಕರು ಬಡತನದರೇಖೆಗಿಂತ ಕೆಳಗೆ ಜೀವಿಸುತ್ತಿದ್ದಾರೆ. ನ್ನ ಸಹನಾಗರಿಕರಾದ ಶೇ.22ರಷ್ಟು ಮುಸ್ಲಿಮರು ನಿಮ್ಮ ಸರಕಾರದಿಂದಾಗಿ ಕಡೆಗಣಿಸಲ್ಪಟ್ಟ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಪ್ರತ್ಯೇಕೀಕರಿಸುವ ಹಾಗೂ ಅವಕಾಶ ವಂಚಿತರನ್ನಾಗಿಸುವ ಕಾರ್ಯಸೂಚಿಯನ್ನು ಮುಂದಕ್ಕೊಯ್ಯಲು ರೂಪಿಸುವಂತಹ ಕಾನೂನುಗಳು ಹಾಗೂ ನೀತಿಗಳಿಗೆ ಸಹಿ ಹಾಕಲು ಬಳಸುವ ಮೇಜನ್ನು ನಮ್ಮ ಸರಕಾರದ ಮುಖ್ಯಸ್ಥರಿಗಾಗಿ ವಿನ್ಯಾಸಗೊಳಿಸಲು ಹಾಗೂ ನಿರ್ಮಿಸಲು ನನಗೆ ನೈತಿಕವಾಗಿ ಕಷ್ಟಸಾಧ್ಯವೆಂದು ನನಗೆ ಅರಿವಾಗಿದೆಯೆಂದು ಕುನಾಲ್ ಅವರು ಮೋದಿಯವರ ಖಾಸಗಿ ಕಾರ್ಯದರ್ಶಿಗೆ ನೀಡಿದ ಇಮೇಲ್ ಪತ್ರದಲ್ಲಿ ತಿಳಿಸಿದ್ದಾರೆ.
ಇತಿಹಾಸವು ‘ನಾಝಿ’ಗಳ ಬೆಂಬಲಿಗರು, ಅವರಿಗೆ ಸರಕು, ಸಾಮಾಗ್ರಿಗಳನ್ನು ಪೂರೈಕೆ ಮಾಡುವವರನ್ನು ಹಾಗೂ ಅವರ ಸಿದ್ದಾಂತಗಳ ಪ್ರತಿಪಾದಕರನ್ನು ಕೂಡಾ ‘ನಾಝಿ’ಗಳೆಂಬುದಾಗಿಯೇ ಪರಿಗಣಿಸುತ್ತದೆ. ಇತಿಹಾಸವು ನಿಮ್ಮ ಜನಾಂಗೀಯವಾದ, ಫ್ಯಾಸಿಸ್ಟ್ವಾದ,ಸಂಕುಚಿತತೆ, ದ್ವಂದ್ವ ಚಿಂತನೆ ಹಾಗೂ ‘ಕೊಲೆಗಡುಕತನ’ದ ಜೊತೆ ನನಗೂ ನಂಟು ಕಲ್ಪಿಸುವುದನ್ನು ನಾನು ಬಯಸುವುದಿಲ್ಲ. ವಿನ್ಯಾಸಕಾರನಾಗಿ ನಾನು ನನ್ನ ಸುತ್ತಮುತ್ತಲಿರುವ ಜನತೆಗೆ ಸ್ಫೂರ್ತಿಯನ್ನು ನೀಡಲು ಹಾಗೂ ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ನಾನು ಬಯಸುತ್ತಿದ್ದೇನೆ ಎಂದು ಕುಣಾಲ್ ಮರ್ಚಂಟ್ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ತಾನು ಒಂದು ವೇಳೆ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದಲ್ಲಿ, ಏಕತೆ, ಭ್ರಾತೃತ್ವ ಹಾಗೂ ವೈವಿಧ್ಯತೆಯ ಸಂಕೇತವಾಗಿ ಭಾರತದಾದ್ಯಂತದ ಮರಮಟ್ಟು ಹಾಗೂ ಕಚ್ಚಾಸಾಮಾಗ್ರಿಗಳನ್ನು ಬಳಸಿಕೊಂಡು ಮೇಜನ್ನು ಸೃಷ್ಟಿಸುತ್ತಿದ್ದೆ ಎಂದವರು ಬರೆದಿದ್ದಾರೆ. ತಾನು ಅಪ್ಪಟ ಗಾಂಧಿವಾದಿಯಾಗಿದ್ದು, ಅಹಿಂಸೆಯ ನೈಜ ತತ್ವದಲ್ಲಿ ನಂಬಿಕೆಯಿಟ್ಟಿದ್ದೇನೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ಹಾಲಿ ಪ್ರಧಾನಿ ಹಾಗೂ ಆಡಳಿತಾರೂಢ ಪಕ್ಷದ ರಾಜಕೀಯ ಹಾಗೂ ನೀತಿಗಳನ್ನು ತಾನು ಮೂಲಭೂತವಾಗಿ ವಿರೋಧಿಸುತ್ತಿರುವುದರ ಹಿಂದೆ ಯಾವುದೇ ರಹಸ್ಯವಿಲ್ಲ ಎಂದು ಕುನಾಲ್ ಮರ್ಚಂಚ್ ಪತ್ರದಲ್ಲಿ ತಿಳಿಸಿದ್ದಾರೆ. ಬಿಜೆಪಿಯು ನಿರ್ಮಿಸಲು ಯಾವ ರೀತಿಯ ಭಾರತವನ್ನು ನಿರ್ಮಿಸಲು ಬಯಸುತ್ತಿದೆಯೋ ಅಂತಹ ಭಾರತವು ಈ ಹಿಂದೆಯೂ ಅಸ್ತಿತ್ವದಲ್ಲಿರಲಿಲ್ಲ, ವರ್ತಮಾನದಲ್ಲೂ ಅದಕ್ಕೆ ಯಾವುದೇನೆಲೆಗಟ್ಟಿಲ್ಲ ಹಾಗೂ ಭವಿಷ್ಯದಲ್ಲೂ ಅದು ಸಮರ್ಥನೀಯವಲ್ಲ. ನಿಮ್ಮ (ಪರಿಕಲ್ಪನೆಯ) ಭಾರತವು ಪಕ್ಷಪಾತಭರಿತ, ದ್ವೇಷಭರಿತ, ಪ್ರತ್ಯೇಕಿಸುವ ಹಾಗೂ ಜನಾಂಗೀಯವಾದದಿಂದ ಕೂಡಿದೆ’’ ಎಂದು ಕುನಾಲ್ ಈಮೇಲ್ ಪತ್ರದಲ್ಲಿ ತಿಳಿಸಿದ್ದಾರೆ.
ಮಧ್ಯಪ್ರದೇಶ, ಗೋವಾ,ಗುಜರಾತ್, ಕರ್ನಾಟಕ ಹಾಗೂ ಇತರ ಸ್ಥಳಗಳಲ್ಲಿ ಸಂಘಪರಿವಾರದ ಬೆಂಬಲಿಗರಿಂದ ಮುಸ್ಲಿಂ ವಿರೋಧಿ ಹಿಂಸಾಚಾರದ ಘಟನೆಗಳು ನಡೆದ ಕೆಲವೇ ದಿನಗಳ ಬಳಿಕ ಕುಣಾಲ್ ಮರ್ಚಂಟ್ ಈ ನಿರ್ಧಾರ ಕೈಗೊಂಡಿದ್ದಾರೆ.
ಕೃಪೆ: Siasat.com
ಇದನ್ನೂ ಓದಿ: ಪ್ರಧಾನಿ ಕಾರ್ಯಾಲಯದ ಅಧಿಕಾರಿಯ ಹೆಸರಿನಲ್ಲಿ ಫೋರ್ಜರಿ ಪ್ರಕರಣ; ದಿಲ್ಲಿ ಪೊಲೀಸರಿಂದ ತನಿಖೆ







