ಶ್ರೀಲಂಕಾ: ಇಂಧನ ಪೂರೈಕೆಗೆ ಪಡಿತರ ವ್ಯವಸ್ಥೆ ಜಾರಿ
ಕೊಲಂಬೊ, ಎ.15: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಇಂಧನ ಪೂರೈಕೆಗೆ ಪಡಿತರ ವ್ಯವಸ್ಥೆ ಶುಕ್ರವಾರದಿಂದ ಜಾರಿಗೆ ಬಂದಿರುವುದಾಗಿ ಸರಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್(ಸಿಪಿಸಿ) ಘೋಷಿಸಿದೆ. ದ್ವಿಚಕ್ರ ವಾಹನಗಳಿಗೆ ಒಂದು ಬಾರಿ ಗರಿಷ್ಟ 1,000 ರೂ. ಮೊತ್ತದ ಇಂಧನ, ತ್ರಿಚಕ್ರ ವಾಹನಗಳಿಗೆ ಗರಿಷ್ಟ 1,500 ರೂ. ಮೊತ್ತದ ಇಂಧನ, ಕಾರು, ಜೀಪು ಮತ್ತು ವ್ಯಾನ್ಗಳಿಗೆ ಗರಿಷ್ಟ 5,000 ರೂ. ಮೌಲ್ಯದ ಇಂಧನ ಖರೀದಿಸಬಹುದು. ಬಸ್ಸು, ಲಾರಿ ಮತ್ತು ವಾಣಿಜ್ಯ ವಾಹನಗಳಿಗೆ ಇಂಧನ ಪಡಿತರದಿಂದ ವಿನಾಯಿತಿ ನೀಡಲಾಗಿದೆ ಎಂದು ಸಿಪಿಸಿ ಹೇಳಿಕೆ ತಿಳಿಸಿದೆ.
ಶ್ರೀಲಂಕಾ ಸರಕಾರ ಕಳೆದ ಕೆಲ ತಿಂಗಳಿಂ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು ಮರುಪಾವತಿಸಬೇಕಿರುವ ಸಾಲದ ಹೊರೆಯಿಂದ ತತ್ತರಿಸಿದೆ. ಜೊತೆಗೆ ವಿದೇಶಿ ವಿನಿಮಯ ದಾಸ್ತಾನು ಕನಿಷ್ಟ ಮಟ್ಟಕ್ಕೆ ಕುಸಿದ ಕಾರಣ ಔಷಧ, ಹಾಲಿನ ಪುಡಿ, ಅಡುಗೆ ಅನಿಲ, ಸೀಮೆಎಣ್ಣೆ ಹಾಗೂ ಇತರ ಅಗತ್ಯ ವಸ್ತುಗಳ ತೀವ್ರ ಕೊರತೆ ಎದುರಾಗಿದೆ. ಇಂಧನದ ಕೊರತೆಯನ್ನು ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ಪೆಟ್ರೋಲ್ ಬಂಕ್ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಇಂಧನ ಖರೀದಿಯ ಸಂದರ್ಭ ಹಲವು ಬಾರಿ ಘರ್ಷಣೆ ನಡೆದಿದ್ದರಿಂದ ಪೆಟ್ರೋಲ್ ಬಂಕ್ಗಳಲ್ಲಿ ಭದ್ರತೆಗೆ ಸೇನೆಯ ಯೋಧರನ್ನು ನಿಯೋಜಿಸಲಾಗಿದೆ.







