ಉಪ ಚುನಾವಣೆ ಫಲಿತಾಂಶ: ಟಿಎಂಸಿಯ ಬಾಬುಲ್ ಸುಪ್ರಿಯೋ, ಶತ್ರುಘ್ನ ಸಿನ್ಹಾಗೆ ಮುನ್ನಡೆ
ಛತ್ತೀಸ್ ಗಢ, ಕೊಲ್ಲಾಪುರದಲ್ಲಿ ಕಾಂಗ್ರೆಸ್ ಗೆ ಮುನ್ನಡೆ, ಬಿಹಾರದಲ್ಲಿ ಆರ್ ಜೆಡಿಗೆ ಗೆಲುವು
ಕೋಲ್ಕತಾ: ಪಶ್ಚಿಮಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರ, ಬಂಗಾಳದ ಬಾಲಿಗಂಜ್ , ಛತ್ತೀಸ್ಗಢದ ಖೈರಗಢ, ಬಿಹಾರದ ಬೋಚಹಾನ್ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ ಸಹಿತ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಶನಿವಾರ ಬೆಳಗ್ಗೆ ಆರಂಭವಾಗಿದೆ.
ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ, ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ 2.5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಬಾಲಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಪಕ್ಷಾಂತರವಾಗಿರುವ ತೃಣಮೂಲದ ನಾಯಕ ಬಾಬುಲ್ ಸುಪ್ರಿಯೋ ಸುಮಾರು 14,000ಕ್ಕೂ ಅಧಿಕ ಮತಗಳಿಂದ ಮುಂದಿದ್ದಾರೆ.
ಬಿಹಾರದ ಬೋಚಹಾನ್ ವಿಧಾನಸಭಾ ಕ್ಷೇತ್ರದಲ್ಲಿ ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುನ್ನಡೆ ಸಾಧಿಸಿದೆ. ಛತ್ತೀಸ್ಗಢದ ಖೈರಗಢ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಬಿಹಾರದ ಬೋಚಹಾನ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) 36,000 ಮತಗಳ ಅಂತರದಿಂದ ಭರ್ಜರಿಯಾಗಿ ಗೆದ್ದಿದೆ.
ರಾಷ್ಟ್ರೀಯ ಜನತಾ ದಳದ ಅಭ್ಯರ್ಥಿ ಅಮರ್ ಕುಮಾರ್ ಪಾಸ್ವಾನ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬೇಬಿ ಕುಮಾರಿ ವಿರುದ್ಧ ಗೆಲುವು ಸಾಧಿಸಿದ್ದಾರೆ ಎಂದು ವರದಿಯಾಗಿದೆ.