ಯುಪಿಎಸ್‍ಸಿ ಯ ನೂತನ ಅಧ್ಯಕ್ಷ ಮನೋಜ್ ಸೋನಿಗೆ ಬಿಜೆಪಿ, ಆರೆಸ್ಸೆಸ್ ಜತೆಗೆ ನಿಕಟ ನಂಟು; ವರದಿ

ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ಇದರ ನೂತನ ಅಧ್ಯಕ್ಷರಾಗಿರುವ ಮನೋಜ್ ಸೋನಿ ಅವರು ಬಿಜೆಪಿ ಮತ್ತು ಆರೆಸ್ಸೆಸ್ ಜತೆಗೆ ನಿಕಟ ನಂಟು ಹೊಂದಿದವರಾಗಿದ್ದಾರೆ ಎಂಬ ಗೌರವ್ ವಿವೇಕ್ ಭಟ್ನಾಗರ್ ಅವರ ವಿಶೇಷ ವರದಿಯೊಂದು thewire.in ನಲ್ಲಿ ಪ್ರಕಟವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಸೋನಿ ಅವರ ಭಾಷಣ ಬರಹಗಾರರಾಗಿದ್ದರೆಂದು ಹೇಳಲಾಗಿದೆ. ಮೋದಿ ಜತೆಗೆ ಅವರಿಗಿದ್ದ ನಿಕಟ ಸಂಬಂಧದಿಂದಾಗಿ ಅವರನ್ನು 'ಛೋಟೆ ಮೋದಿ' ಎಂದೂ ಕರೆಯಲಾಗುತ್ತಿತ್ತು.
ಈ ಹಿಂದೆ ಗುಜರಾತ್‍ನ ವಡೋದರಾದ ಎಂಎಸ್ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದ ಸೋನಿ, ದೇಶದಲ್ಲಿ ಉಪಕುಲಪತಿ ಹುದ್ದೆಗೆ ಏರಿದ್ದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದರು. ವಿವಿ ಕೈಗೊಂಡ ಹಲವಾರು ಪ್ರಮುಖ ನಿರ್ಧಾರಗಳಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಗರಿಗೆ ಪ್ರಭಾವ ಬೀರಲು ಅವರು ಅನುಮತಿಸಿದ್ದರೆಂದು ಹೇಳಲಾಗುತ್ತಿದೆ ಎಂದು thewire.in ವರದಿ ಮಾಡಿದೆ.
ಅವರು ಬರೆದಿರುವ 'ಇನ್ ಸರ್ಚ್ ಆಫ್ ಅ ಥರ್ಡ್ ಸ್ಪೇಸ್'ನಲ್ಲಿ ಅವರು ಗುಜರಾತ್‍ನಲ್ಲಿ 2002ರಲ್ಲಿ ನಡೆದ ಹಿಂಸಾಚಾರದ ಕುರಿತಂತೆ ಹಿಂದುತ್ವವಾದಿಗಳ ಪರ ಇರುವಂತೆ ತಿರುಚಿದ ವಿವರಣೆಗಳನ್ನು ನೀಡಿದ್ದರೆಂದೂ ಕೆಲ ವರದಿಗಳು ಹೇಳಿವೆ.
ಬಾಲ್ಯದಿಂದಲೂ ಅವರು ಸ್ವಾಮಿನಾರಾಯಣ್ ಪಂಥದ ಅನೂಪಮ್ ಮಿಷನ್ ಜತೆಗೆ ಗುಜರಾತ್‍ನ ಆನಂದ್ ಜಿಲ್ಲೆಯಲ್ಲಿ ನಂಟು ಹೊಂದಿದ್ದಾರೆ. ಜನವರಿ 2020ರಲ್ಲಿ ಅವರನ್ನು ನಿಷ್ಕಾಮ ಕರ್ಮಯೋಗಿ ಎಂದೂ ಈ ಪಂಥ ಗುರುತಿಸಿತ್ತು.
ಬಡ ಕುಟುಂಬದಿಂದ ಬಂದಿರುವ ಅವರು ಮುಂಬೈಯ ಬೀದಿಗಳಲ್ಲಿ ಒಂದೊಮ್ಮೆ ಅಗರಬತ್ತಿ ಮಾರಾಟ ಮಾಡಿದವರಾಗಿದ್ದು ಮುಂದೆ 2005ರಲ್ಲಿ ಎಂಎಸ್ ವಿವಿಯ ಅತ್ಯಂತ ಕಿರಿಯ ಉಪಕುಲಪತಿಯಾದರು.
ಹನ್ನೆರಡನೇ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅನುತ್ತೀರ್ಣರಾದ ನಂತರ ಅವರು ರಾಜ್ ರತ್ನ ಪಿಟಿ ಪಟೇಲ್ ಕಾಲೇಜಿನಲ್ಲಿ ಕಲಾ ವಿಭಾಗ ಆಯ್ದುಕೊಂಡಿದ್ದರಲ್ಲದೆ ರಾಜ್ಯಶಾಸ್ತ್ರದಲ್ಲಿ ಅಂತರಾಷ್ಟ್ರೀಯ ಅಧ್ಯಯನ ವಿಷಯವನ್ನು ಆಯ್ದುಕೊಂಡಿದ್ದರು.
"ಪೋಸ್ಟ್ ಕೋಲ್ಡ್ ವಾರ್ ಇಂಟರ್ ನ್ಯಾಷನಲ್ ಟ್ರಾನ್ಸಿಶನ್ ಆ್ಯಂಡ್ ಇಂಡೋ-ಯುಎಸ್ ರಿಲೇಶನ್ಸ್' ಮಹಾಪ್ರಬಂಧಕ್ಕೆ ಅವರು ಡಾಕ್ಟರೇಟ್ ಪಡೆದಿದ್ದಾರೆ. ನಂತರ ಅವರು ಸರ್ದಾರ್ ಪಟೇಲ್ ವಿವಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ಈ ಹಿಂದೆ ಯುಪಿಎಸ್‍ಸಿ ಅಧ್ಯಕ್ಷರುಗಳು ಅತ್ಯುತ್ತಮ ಶಿಕ್ಷಣ ತಜ್ಞರಾಗಿದ್ದರು ಹಾಗೂ ಹಲವು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದವರಾಗಿದ್ದರು. ಪ್ರಮುಖವಾಗಿ ಹೆಚ್ಚಿನವರು ಐಎಎಸ್ ಕೇಡರ್ ಅಧಿಕಾರಿಗಳಾಗಿದ್ದರು.
ಆದರೆ ಇದೀಗ ಬಿಜೆಪಿ ಮತ್ತು ಆರೆಸ್ಸೆಸ್ ಜತೆ ನಂಟು ಹೊಂದಿರುವ ಸೋನಿ ಅವರು ಆಯೋಗದ ಅಧ್ಯಕ್ಷರಾಗಿರುವುದರಿಂದ ಅಖಿಲ ಭಾರತ ಸೇವೆಗಳಿಗೆ ನೇಮಕಾತಿಗಳಲ್ಲಿ ರಾಜಕೀಯ ಪ್ರಭಾವ ಬೀರುವ ಸಾಧ್ಯತೆಯಿದೆಯೆಂದು ನಂಬಲಾಗಿದೆ ಎಂದು thewire.in ವರದಿ ಮಾಡಿದೆ.