ಬೆಳ್ತಂಗಡಿಯಲ್ಲಿ ಎಂ.ಆರ್.ಪಿ.ಎಲ್. ಪೈಪ್ ಲೈನ್ ಗೆ ಕನ್ನ: ಪೆಟ್ರೋಲ್ ಕಳ್ಳತನ

ಬೆಳ್ತಂಗಡಿ, ಎ.16: ಎಂ.ಆರ್.ಪಿ.ಎಲ್. ಪೈಪ್ ಲೈನ್ ಕೊರೆದು ಇಂಧನ ತೈಲ ಕಳ್ಳತನ ಮಾಡಿರುವ ಪ್ರಕರಣ ಮಚ್ಚಿನ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಬಳಿ ಪತ್ತೆಯಾಗಿದ್ದು, ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಸ್ತೆ ಬದಿಯ ಮೋರಿಯ ಬಳಿ ಮಣ್ಣು ಅಗೆದು ಪೈಪನ್ನು ಕೊರೆದು ಪೈಪಿಗೆ ಗೇಟ್ ವಾಲ್ ಅಳವಡಿಸಿ ಪೈಪ್ ಮುಖಾಂತರ ಪೆಟ್ರೋಲ್ ಕಳ್ಳತನ ಮಾಡುತ್ತಿರುವುದು ಹೊರ ನೋಟಕ್ಕೆ ಸ್ಪಷ್ಟವಾಗುತ್ತಿದೆ.
ಮುಖ್ಯ ಪೈಪ್ ಗೆ ಗೇಟ್ ವಾಲ್ ಹಾಕಿ ಸಣ್ಣ ಪೈಪ್ ಅಳವಡಿಸಲಾಗಿದ್ದು ಅಲ್ಲಿಂದ ಮುಂದಕ್ಕೆ ಪೈಪಿನ ಮೂಲಕವೇ ಕಳ್ಖತನ ನಡೆದಿದೆ. ಆದರೆ ಈವರೆಗೆ ಪೈಪ್ ಎಲ್ಲಿ ಕೊನೆಗೊಳ್ಳುತ್ತಿದೆ, ಎಲ್ಲಿ ಪೆಟ್ರೋಲ್ ಶೇಖರಣೆ ಮಾಡಲಾಗುತ್ತಿತ್ತು ಎಂಬುದು ಪತ್ತೆಯಾಗಿಲ್ಲ.
ಈ ಇಂಧನ ತೈಲ ಕಳವು ಜಾಲದ ಹಿಂದಿರುವವರ ಬಗ್ಗೆ ಪೊಲೀಸರಿಗೆ ಕೆಲವು ಸುಳಿವುಲಭ್ಯವಾಗಿರುವುದಾಗಿ ತಿಳಿದು ಬಂದಿದೆ. ಪೂಂಜಾಲಕಟ್ಟೆ ಪೊಲೀಸರು ಪ್ರಕರಣದ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದಾರೆ. ಈ ಪ್ರದೇಶದಲ್ಲಿ ಈ ಹಿಂದೆಯೂ ಇದೇರೀತಿ ಪೆಟ್ರೋಲ್ ಕಳ್ಳತನ ನಡೆದಿತ್ತು. ಇದೀಗ ನಡೆದಿರುವ ಇಂಧನ ತೈಲ ಕಳವು ಜಾಲದ ವ್ಯಾಪ್ತಿ ಎಷ್ಟೆಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ.