ಬಿಹಾರದಲ್ಲಿ ಉಪ ಚುನಾವಣೆ: ಆರ್ ಜೆಡಿಗೆ ಭರ್ಜರಿ ಜಯ
![ಬಿಹಾರದಲ್ಲಿ ಉಪ ಚುನಾವಣೆ: ಆರ್ ಜೆಡಿಗೆ ಭರ್ಜರಿ ಜಯ ಬಿಹಾರದಲ್ಲಿ ಉಪ ಚುನಾವಣೆ: ಆರ್ ಜೆಡಿಗೆ ಭರ್ಜರಿ ಜಯ](https://www.varthabharati.in/sites/default/files/images/articles/2022/04/16/331921-1650102213.jpg)
PHOTO PTI
ಪಾಟ್ನಾ: ಬಿಹಾರದ ಬೋಚಹಾನ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) 36,000 ಮತಗಳ ಅಂತರದಿಂದ ಭರ್ಜರಿಯಾಗಿ ಗೆದ್ದಿದೆ.
ಬಿಹಾರದ ಮುಝಾಫರ್ಪುರ ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಾದ ಬೋಚಹಾನ್ ವಿಧಾನಸಭಾ ಸ್ಥಾನವು ಬಾಲಿವುಡ್ ಸೆಟ್ ವಿನ್ಯಾಸಕ-ರಾಜಕಾರಣಿ ಮುಖೇಶ್ ಸಹಾನಿ ಅವರ ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) ಟಿಕೆಟ್ನಲ್ಲಿ ಗೆದ್ದಿದ್ದ ಶಾಸಕ ಮುಸಾಫಿರ್ ಪಾಸ್ವಾನ್ ನಿಧನದ ನಂತರ ತೆರವಾಗಿತ್ತು. ಅಮರ್ ಪಾಸ್ವಾನ್ ಆರ್ ಜೆಡಿ ಅಭ್ಯರ್ಥಿಯಾಗಿ ಕಣಕ್ಕಿಳಿದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬೇಬಿ ಕುಮಾರಿ ಅವರನ್ನು ಸೋಲಿಸಿದ್ದಾರೆ.
ಇದೇ ವೇಳೆ ಛತ್ತೀಸ್ಗಢದ ಖೈರಗಢ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಪಶ್ಚಿಮಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ, ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಸುಮಾರು 2 ಲಕ್ಷ ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.
ಬಾಲಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಪಕ್ಷಾಂತರವಾಗಿರುವ ತೃಣಮೂಲದ ನಾಯಕ ಬಾಬುಲ್ ಸುಪ್ರಿಯೋ ಕೂಡ ಮುನ್ನಡೆ ಕಾಯ್ದುಕೊಂಡಿದ್ದಾರೆ.